Advertisement

ಅದ್ಧೂರಿ ವಿಮೋಚನಾ ದಿನ ಆಚರಣೆ

10:54 AM Sep 07, 2019 | Naveen |

ಕಲಬುರಗಿ: ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಸೆ. 17ದಂದು ವಿಜೃಂಭಣೆಯಿಂದ ಆಚರಿಸಲು ಹಾಗೂ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಜಿಲ್ಲಾಧಿಕಾರಿ ಬಿ. ಶರತ್‌ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹೈದ್ರಾಬಾದ ಕರ್ನಾಟಕ ಪ್ರದೇಶ ವಿಮೋಚನಾ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆ ನಿರ್ಧಾರ ಕೈಗೊಂಡಿತು.

Advertisement

ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಭಾಷಣ, ಚರ್ಚೆ ಹಾಗೂ ನಿಬಂಧ ಸ್ಪರ್ಧೆ ಏರ್ಪಡಿಸಬೇಕು. ದಿನಾಚರಣೆ ಅಂಗವಾಗಿ ಅಂದು ಬೆಳಗ್ಗೆ 8:30ಕ್ಕೆ ಸರ್ದಾರ್‌ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ, ತದನಂತರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ(ಡಿ.ಎ.ಆರ್‌.) ಮೈದಾನದಲ್ಲಿ ಬೆಳಗ್ಗೆ 9ಕ್ಕೆ ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಹೈಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ವಿಮೋಚನಾ ದಿನದಂದು ಜಿಲ್ಲಾ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆಯುವ ವಿಮೋಚನಾ ದಿನಾಚರಣೆಯ ಧ್ವಜಾರೋಹಣ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಯಿತು.

ಅದೇ ರೀತಿ ಅಂದು ತಾಲೂಕು ಮಟ್ಟದ ಕಚೇರಿ ಹಾಗೂ ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ಹೈ.ಕ. ವಿಮೋಚನಾ ದಿನ ಆಚರಿಸಲು ಸುತ್ತೋಲೆ ಹೊರಡಿಸಲಾಗುವುದು. ದಿನಾಚರಣೆ ಅಂಗವಾಗಿ ನಡೆಯುವ ಪರೇಡ್‌ಗೆ ತಂಡಗಳನ್ನು ಸಜ್ಜುಗೊಳಿಸಬೇಕು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಪೂರ್ವಸಿದ್ಧತೆ ಕೈಗೊಳ್ಳಿ ಎಂದು ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ಲಾಸ್ಟಿಕ್‌ ಧ್ವಜ ಮಾರಾಟ ಮಾಡಿದಲ್ಲಿ ಪರವಾನಗಿ ರದ್ದು: ಪ್ಲಾಸ್ಟಿಕ್‌ ಬಳಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಯಾರೂ ಪ್ಲಾಸ್ಟಿಕ್‌ ಧ್ವಜ ಬಳಸಬಾರದು. ಪ್ಲಾಸ್ಟಿಕ್‌ ಧ್ವಜ ಮಾರಾಟ ಮಾಡುವ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಅಂಗಡಿ-ಮುಂಗಟ್ಟುಗಳಿಗೆ ದೀಪಾಲಂಕರ: ವಿಮೋಚನಾ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಪ್ರಮುಖ ವೃತ್ತಗಳು ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್, ಡಾ| ಬಿ.ಆರ್‌. ಅಂಬೇಡ್ಕರ್‌, ಮಹಾತ್ಮಾ ಗಾಂಧಿ, ಜಗಜ್ಯೋತಿ ಬಸವೇಶ್ವರ ಮತ್ತು ಡಾ| ಬಾಬು ಜಗಜೀವನರಾಂ ಪುತ್ಥಳಿಗೆ ವಿದ್ಯುದ್ದೀಪಗಳಿಂದ ಅಲಂಕರಿಸುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ದೀಪಾಲಂಕಾರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತವನ್ನು ಸ್ವಚ್ಛಗೊಳಿಸಿ ಹೂವಿನಿಂದ ಅಲಂಕರಿಸಬೇಕು. ಜಲಮಂಡಳಿ ಮತ್ತು ಪಾಲಿಕೆಯಿಂದ ಧ್ವಜಾರೋಹಣ ನಡೆಯುವ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್‌ ಮತ್ತು ಅಗ್ನಿಶಾಮಕ ದಳದ ವ್ಯವಸ್ಥೆ, ಮಕ್ಕಳಿಗೆ ಸಿಹಿ ತಿಂಡಿ ನೀಡುವ ವ್ಯವಸ್ಥೆ ಮಾಡಬೇಕು. ಸಮಾರಂಭದಲ್ಲಿ ವಿದ್ಯುತ್‌ ಕಡಿತವಾಗದಂತೆ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸಂಜೆ 5ರಿಂದ 8ರ ವರೆಗೆ ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ಸಾರುವ ಮತ್ತು ದೇಶ ಭಕ್ತಿಯ ಸಂಗೀತ ಪ್ರದರ್ಶನ ಮಾಡಬೇಕು ಎಂದರು.

ಸಾಹಿತಿ ಪ್ರೊ| ವಸಂತ ಕುಷ್ಠಗಿ, ಹೈ.ಕ.ಹೋರಾಟ ಸಮಿತಿ ಕಾರ್ಯದರ್ಶಿ ಲಕ್ಷ್ಮಣ ದಸ್ತಿ, ಸಂಘಟನೆಗಳ ಮುಖಂಡರಾದ ಮಂಜುನಾಥ ನಾಲವಾರಕರ್‌, ಸಚಿನ್‌ ಮಾತನಾಡಿ ಹೈ.ಕ.ವಿಮೋಚನಾ ಇತಿಹಾಸವನ್ನು ಯುವ ಪೀಳಿಗೆಗೆ ಮನದಟ್ಟು ಮಾಡಲು ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಈ ಕುರಿತು ಉಪನ್ಯಾಸವನ್ನು ಜಿಲ್ಲಾಡಳಿತ ಆಯೋಜಿಸಬೇಕು. ಪ್ರತಿ ಬಾರಿ ವಿಮೋಚನಾ ದಿನಚರಣೆಗೆ ಮುಖ್ಯಮಂತ್ರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂಬ ನಿರ್ಣಯವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಬೇಕು, ಹೈ.ಕ. ಇತಿಹಾಸ ಪಠ್ಯದಲ್ಲಿ ಸೇರ್ಪಡೆ ವಿಚಾರ ನನೆಗುದ್ದಿಗೆ ಬಿದ್ದಿದ್ದು, ಇದಕ್ಕೆ ಪುನರ್‌ ಚಾಲನೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸ್‌ ಅಧೀಕ್ಷಕ ವಿನಾಯಕ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಪ್ರೊಬೇಷನರ್‌ ಐ.ಎ.ಎಸ್‌ ಅಧಿಕಾರಿ ಡಾ| ಗೋಪಾಲಕೃಷ್ಣ ರಾಘವೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next