ಕಲಬುರಗಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಕಂಟೇನ್ಮೆಂಟ್ ಝೋನ್‌ಗಳಲ್ಲಿ ಜನರ ಓಡಾಟದ ಮೇಲೆ ನಿಗಾ ವಹಿಸಲು ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದ್ದು, ಬೇಕಾಬಿಟ್ಟಿಯಾಗಿ ಮನೆಯಿಂದ ಬರುವ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.
ಮಹಾನಗರ ವ್ಯಾಪ್ತಿಯಲ್ಲೇ ಇದುವರೆಗೂ 17 ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿವೆ. ಮೂವರು ಮೃತಪಟ್ಟಿದ್ದಾರೆ. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 11 ಜನ ಕೊರೊನಾ ಪೀಡಿತರು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ವಾಸವಿದ್ದ ಪ್ರದೇಶದಿಂದ ಸೋಂಕು ಹರಡದಂತೆ ತಡೆಯಲು ಆಯಾ ವಾರ್ಡ್‌ಗಳನ್ನು ಕಂಟೇನ್ಮೆಂಟ್ ಝೋನ್ (ನಿರ್ಬಂಧಿತ ವಲಯ) ಎಂದು ಘೋಷಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 2, 13, 22, 25, 28, 29 ಮತ್ತು 50 ಅನ್ನು ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಈ ವಾರ್ಡ್‌ಗಳ ಜನತೆಯನ್ನು ಹೊರ ಬರದಂತೆ ಹಾಗೂ ಆ ವಾರ್ಡ್‌ಗಳಿಗೆ ಬೇರೆ ಪ್ರದೇಶದ ಜನತೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಇದೀಗ ಆ ಪ್ರದೇಶದ ಜನತೆ ಮೇಲೆ ಮತ್ತಷ್ಟು ನಿಗಾವಣೆ ವಹಿಸಲು ಮಹಾನಗರ ಪಾಲಿಕೆ ವತಿಯಿಂದ ಡ್ರೋಣ್ ಕ್ಯಾಮರಾ ಉಪಯೋಗಿಸಲಾಗುತ್ತಿದೆ. ಪ್ರತಿ ನಿತ್ಯವೂ ಕಂಟೇನ್ಮೆಂಟ್‌ಝೋನ್‌ನಲ್ಲಿ ಓಡಾಡುವ ಜನರ ಮೇಲೆ ಹಾಗೂ ಮನೆಗಳಿಂದ ಅನಗತ್ಯವಾಗಿ ಹೊರ ಬರುವವರ ಮೇಲೆ ಕಣ್ಗಾವಲು ಮಾಡಲಿದೆ ಎನ್ನುತ್ತಾರೆ ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಹಾಗೂ ಪರಿಸರ ಅಭಿಯಂತರ ಮುನಾಫ್ ಪಟೇಲ್.
ಲಾಕ್‌ಡೌನ್ ಬಿಗಿ: ನಗರದಲ್ಲಿ ಪೊಲೀಸ್ ಆಯುಕ್ತಾಲಯದಿಂದ ಲಾಕೌಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಪೊಲೀಸರು ರಸ್ತೆಗೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್ಲೆಡೆ ಬಂದೋಬಸ್ತ್ ಕೈಗೊಂಡು ಅನಗ್ಯತವಾಗಿ ಓಡಾಡುವವರಿಗೆ ಲಾಠಿಯಿಂದ ಬಿಸಿ ಮುಟ್ಟಿಸಿದ್ದರು. ಡಿಸಿಪಿ ಡಿ.ಕಿಶೋರ್ ಬಾಬು, ಸಂಚಾರಿ ಎಸಿಪಿ ವೀರೇಶ ಕರಡಿಗುಡ್ಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನಗರಾದ್ಯಂತ ಸಂಚರಿಸಿ ಭದ್ರತೆ ಪರಿಶೀಲಿಸಿ ಜನ ಸಂಚಾರ ಕಡಿವಾಣ ಹಾಕಲು ಕ್ರಮ ವಹಿಸುತ್ತಿದ್ದಾರೆ.