Advertisement

ಲಾರಿ-ಟಿಪ್ಪರ್‌ ಪ್ರಯಾಣಕ್ಕೆ ಕಡಿವಾಣ ಹಾಕಿ

01:10 PM May 17, 2019 | Naveen |

ಕಲಬುರಗಿ: ಜಿಲ್ಲೆಯ ಕೆಲ ಭಾಗಗಳಲ್ಲಿ ಸರಕು ಸಾಗಣೆ ಪೂರೈಸುವ ಲಾರಿ-ಟಿಪ್ಪರ್‌ ಸೇರಿದಂತೆ ಇನ್ನಿತರ ಗೂಡ್ಸ್‌ ವಾಹನಗಳಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗಲಾಗುತ್ತಿದ್ದು, ಇದು ಅಪಘಾತಕ್ಕೆ ಆಹ್ವಾನಿಸಿದಂತಿದೆ. ಇವುಗಳನ್ನು ನಿಯಂತ್ರಿಸುವುದಲ್ಲದೆ ಸಾರ್ವಜನಿಕರನ್ನು ಕರೆದುಕೊಂಡು ಒಯ್ಯುವ ಇಂತಹ ವಾಹನಗಳನ್ನು ಜಪ್ತಿ ಮಾಡಿಕೊಂಡು ವಾಹನ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಪ್ರಕರಣದಲ್ಲಿ ಚಾಲಕನ ಚಾಲನಾ ಪರವಾನಗಿ ಅಮಾನತ್ತಿನಲ್ಲಿರಿಸಬೇಕು ಹಾಗೂ ವಾಹನದ ಪರವಾನಗಿ ರದ್ದತಿಗೂ ಕ್ರಮ ಜರುಗಿಸಬೇಕು. ಇದಲ್ಲದೆ ಜಿಲ್ಲೆಯ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಟಂಟಂ, ಟೆಂಪು, ಜೀಪ್‌, ಕ್ರೂಸರ್‌ ವಾಹನಗಳಲ್ಲಿ ನಿಗದಿತ ಆಸನಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡುತ್ತಿದ್ದಲ್ಲಿ ಅಂತಹವರ ಮೇಲೆಯೂ ಆರ್‌ಟಿಒ ಹಾಗೂ ಪೊಲೀಸ್‌ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ರಸ್ತೆ ಅಪಘಾತ ತಪ್ಪಿಸಲು ಅಲ್ಲಲ್ಲಿ ರೋಡ್‌ ಹಂಪ್ಸ್‌ ನಿರ್ಮಿಸಿ, ರಸ್ತೆ ಮಧ್ಯದಲ್ಲಿರುವ ಗುಂಡಿಗಳನ್ನು ಮುಚ್ಚಿರಿ. ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ರೇಡಿಯಂ ಸ್ಟಿಕರ್‌ಗಳ ಸಂಕೇತ ಚಿಹ್ನೆಗಳನ್ನು ಹೆಚ್ಚಿನ ಜನಸಂದಣಿ ಇರುವ ಜಂಕ್ಷನಗಳಲ್ಲಿ ಅಳವಡಿಸಬೇಕು ಎಂದು ಹೇಳಿದರು.

ಕ್ರಿಯಾ ಯೋಜನೆ ಸಲ್ಲಿಸಿ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ರಸ್ತೆ ಅಪಘಾತಗಳ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾಮಟ್ಟದ ಕ್ರಿಯಾ ಯೋಜನೆಯನ್ನು ಸಾರಿಗೆ ಆಯುಕ್ತರಿಗೆ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಪೊಲೀಸ್‌, ಕಾರ್ಮಿಕ, ಲೋಕೋಪಯೋಗಿ, ಈ.ಕ.ರ.ಸಾ.ಸಂಸ್ಥೆ, ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಆರ್‌ಟಿಒ ಕಚೇರಿಗೆ ಕೂಡಲೆ ಸಲ್ಲಿಸಬೇಕು. ಇದರೊಂದಿಗೆ ಬ್ಲ್ಯಾಕ್‌ ಸ್ಪಾಟ್ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದರು.

ಡಿಮಾಂಡ್‌ ಸರ್ವೇ ಕೈಗೊಳ್ಳಿ: ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೇಡಿಕೆ ಅನುಗುಣವಾಗಿ ಬಸ್‌ ಸಂಚಾರ ಪೂರೈಸಲು ಪ್ರಸ್ತುತ ಆ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಓಡಾಟ ಹಾಗೂ ನಿತ್ಯ ಜನರ ಸಂಚಾರದ ಬಗ್ಗೆ ಕೂಲಂಕುಷವಾಗಿ ಸರ್ವೇ ಮಾಡಿ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ಅಧೀಕ್ಷಕ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮಾತನಾಡಿ, ಜಿಲ್ಲೆಯ ಹಲವು ಕಡೆ ಬ್ಲ್ತ್ರ್ಯಾಕ್‌ ಸ್ಪಾಟ್ ಸ್ಥಳಗಳನ್ನು ಗುರುತಿಸಲು ಪೊಲೀಸ್‌ ಹಾಗೂ ಲೋಕೋಪಯೋಗಿ ಇಲಾಖೆಯವರು ಮರು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಆರ್‌ಟಿಒ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಸಭೆಯಲ್ಲಿ ಉಪ ಸಾರಿಗೆ ಆಯುಕ್ತೆ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಶೋಭಾ, ಸಹಾಯಕ ಆರ್‌.ಟಿ.ಓ ಅಧಿಕಾರಿ ಕೆ.ದಾಮೋದರ, ಜಿಪಂ ಉಪ ಕಾರ್ಯದರ್ಶಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಾಧವರಾವ ಕೆ.ಪಾಟೀಲ, ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಣಗೌಡ ಪಾಟೀಲ, ಕಾರ್ಮಿಕ ಅಧಿಕಾರಿ ಶ್ರೀಹರಿ, ಸಂಚಾರಿ ಪಿ.ಐ. ಮಹಾದೇವ ಸೇರಿದಂತೆ ಅಧಿಕಾರಿಗಳು ಇದ್ದರು.

ಶಾಲೆಗಳು ಸ್ಕೂಲ್ ಬಸ್‌ ಪೂರೈಸಲಿ: ಕಲಬುರಗಿ ನಗರದಲ್ಲಿ ಶಾಲಾ ಮಕ್ಕಳನ್ನು ಆಟೋದಲ್ಲಿ ಮಿತಿ ಮೀರಿ ಕೂರಿಸಿಕೊಂಡು ಪ್ರಯಾಣ ಮಾಡಲಾಗುತ್ತಿದ್ದು, ಅಪಘಾತ ತಪ್ಪಿಸಲು ಇದರ ನಿಯಂತ್ರಣ ಅಗತ್ಯ. ಆಟೋದಲ್ಲಿ ಮಕ್ಕಳ ಪ್ರಯಾಣ ತಪ್ಪಿಸಲು ಶಾಲಾ ಆಡಳಿತ ಮಂಡಳಿಗಳೆ ಮಕ್ಕಳಿಗಾಗಿ ಶಾಲಾ ಬಸ್‌, ವ್ಯಾನ್‌ ಪೂರೈಸಬೇಕು. ಈ ಸಂಬಂಧ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿ ಎಂದು ಡಿಡಿಪಿಐ ಶಾಂತಗೌಡ ಪಾಟೀಲ್ ಅವರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿ ಶಾಲೆಯಲ್ಲಿ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳ ಸಂಕೇತಗಳ ರೇಖಾಚಿತ್ರ ಬಿಡಿಸಲು ಸಹ ಕ್ರಮವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next