Advertisement

ಆಡಳಿತ ವರ್ಗ ಶಿಕ್ಷಕರ ಸಂಕಟ ನಿವಾರಿಸಲಿ

10:44 AM Sep 06, 2019 | Naveen |

ಕಲಬುರಗಿ: ದೇಶ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು ಅನೇಕ ಸಂಕಟಗಳಲ್ಲಿ ಬೆಂದು ಹೋಗುತ್ತಿದ್ದಾರೆ. ಆಡಳಿತ ವರ್ಗ ಕಣ್ತೆರೆದು ಶಿಕ್ಷಕರ ಸಂಕಟಗಳನ್ನು ಪರಿಹರಿಸಬೇಕೆಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಆಗ್ರಹಿಸಿದರು.

Advertisement

ನಗರ ಹೊರವಲಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ. ಆದರೆ, ಶಿಕ್ಷಕರು ನೆಮ್ಮದಿಯಿಂದ ಕಾರ್ಯ ನಿರ್ವಹಿಸಲಾಗದ ಪರಿಸ್ಥಿತಿ ಇದೆ. ಶಿಕ್ಷಕರಿಗೆ ಪ್ರತಿ ತಿಂಗಳು ಸಿಗಬೇಕಾದ ಸಂಬಳ ವರ್ಷದಲ್ಲಿ ಮೂರ್‍ನಾಲು ಬಾರಿ ಸಿಗುತ್ತದೆ. ದನ ಗಣತಿ, ಜನ ಗಣತಿ, ಆಧಾರ್‌ ಕಾರ್ಡ್‌ ಜೋಡಣೆ, ಬಟ್ಟೆ ಹಂಚೋದು, ತರಕಾರಿ ಲೆಕ್ಕ ಹಾಕೋದು, ಶಾಲೆ ತೊಳಿಯೋದು ಹೀಗೆ ‘ಶೂ ಪಾಲೀಶ್‌’ ಕೆಲಸವೊಂದನ್ನು ಬಿಟ್ಟು 22 ಕಾರ್ಯಕ್ರಮಗಳನ್ನು ಶಿಕ್ಷಕರ ಹೆಗಲಿಗೆ ವಹಿಸಲಾಗಿದೆ. ಇಷ್ಟು ಕಾರ್ಯಗಳನ್ನು ಮಾಡಿ ತರಗತಿಯಲ್ಲಿ ಶಿಕ್ಷಕರು ಪಾಠ ಬೋಧಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಶಿಕ್ಷಕರಿಗೆ ಮೇಲಾಧಿಕಾರಿಗಳ ಕಿರುಕುಳ ಇದೆ. ವರ್ಗಾವಣೆಯಲ್ಲಿ ಗೊಂದಲ ಉಂಟಾಗಬಾರದು ಎಂದು ಸರಳೀಕರಣ ಮಾಡಲಾಗಿದೆ. ಆದರೆ, ವರ್ಗಾವಣೆ ನಿಯಮಗಳನ್ನು ಅಧಿಕಾರಿಗಳು ಪತಿ-ಪತ್ನಿ ಪ್ರಕರಣವೊಂದನ್ನೇ ಗಮನದಲ್ಲಿಟ್ಟು ರೂಪಿಸುತ್ತಿದ್ದಾರೆ. ಇದರಿಂದ ಯಾರಿಗೂ ವರ್ಗಾವಣೆ ಸೌಲಭ್ಯ ಸಿಗುತ್ತಿಲ್ಲ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ)ದ ಶಿಕ್ಷಕರಿಗೆ ಆರು ತಿಂಗಳಿಂದ ಸಂಬಳವಾಗಿಲ್ಲ. ಶಿಕ್ಷಕರಿಗೆ ಸಂಬಳವಾಗದೆ ಇದ್ದರೆ ಡಿಡಿಪಿಐ, ಬಿಇಒಗಳ ಸಂಬಳ ನಿಲ್ಲಿಸುವಂತೆ ಆದೇಶ ತರಲಾಗಿದೆ. ಆದರೆ, ಆ ಆದೇಶ ಧೂಳು ಹಿಡಿಯುತ್ತಿದೆ ಎಂದು ಕಿಡಿಕಾರಿದರು.

ಹೈದ್ರಾಬಾದ ಕರ್ನಾಟಕ ಭಾಗ ಎಂದರೆ ನಿರ್ಲಕ್ಷ್ಯ ಮನೋಭಾವ ಇದೆ. ಶೇ.40ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪದವಿ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸೌಲಭ್ಯಗಳು ಇಲ್ಲ. ಆದರೂ, ಇಲ್ಲಿನ ಸ್ಥಳೀಯ ಅಧಿಕಾರಿಗಳು ಶಿಕ್ಷಣ ಇಲಾಖೆ ನಿರ್ದೇಶಕರು, ಆಯುಕ್ತರ ಬಳಿ ಗುಲಬರ್ಗಾದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ನಾವು ಜೋರು ಮಾಡಿದಾಗ ಮಾತ್ರವೇ ಸಮಸ್ಯೆ ಇದೆ ಎಂದು ಹೇಳುತ್ತಾರೆ ಎಂದು ಸಿಡಿಮಿಡಿಗೊಂಡರು.

Advertisement

ಶಿಕ್ಷಕರ ಬಡ್ತಿ ಪ್ರಕ್ರಿಯೆ ಸಹ ಬಾಕಿ ಇದ್ದು, ಶಿಕ್ಷಣ ಇಲಾಖೆ ಪ್ರಕ್ರಿಯೆಗಳಿಗೆ ನಿರ್ದಿಷ್ಟವಾದ ಸಮಯದ ಗಡಿ ಇಲ್ಲವಾಗಿದೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಮುಂದಿನ ವಾರ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ಇಲ್ಲಿಗೆ ಬರುವವರಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿ, ಶಿಕ್ಷಕರಿಗೆ ಬೋಧಕ ಕೆಲಸ ಕಾರ್ಯಗಳಿಂತ ಬೋಧಕೇತರ ಕೆಲಸಗಳು ಹೆಚ್ಚಾಗಿವೆ. ಬೋಧಕೇತರ ಕೆಲಸಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಮೂರು ವರ್ಷಗಳ ಬಳಿಕ ಕುಂಟುತ್ತಾ, ತೆವಲುತ್ತಾ ವರ್ಗಾವಣೆ ಪ್ರಕ್ರಿಯೆ ಸಾಗಿತ್ತು. ಆದರೆ, ಅದನ್ನೂ ನಿಲ್ಲಿಸಿರುವುದು ಅಪಹಾಸ್ಯ ಎನಿಸುತ್ತಿದೆ. ನೂತನ ಪಿಂಚಣಿ ಯೋಜನೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಬಿ.ಶರತ್‌ ಮಾತನಾಡಿ, ನನಗೂ ಮೂರು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿದೆ. ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಆದರೆ, ಶಿಕ್ಷಕರು ಆತ್ಮಸಾಕ್ಷಿ ಒಪ್ಪುವ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರತಿ ವರ್ಷ ಬರುವ ಮಕ್ಕಳು ಒಂದೇ ರೀತಿಯ ಸಮವಸ್ತ್ರ ಧರಿಸುತ್ತಾರೆ. ಆದರೆ ಅವರ ಅಂತರಾತ್ಮ ಬೇರೆ-ಬೇರೆಯಾಗಿರುತ್ತದೆ. ಶಿಕ್ಷಕರು ಸುಭದ್ರ ದೇಶದ ಪರಿಕಲ್ಪನೆ ಇನ್ನಿಟ್ಟುಕೊಂಡು ಮಕ್ಕಳಿಗೆ ಬೋಧಿಸಬೇಕು ಎಂದರು.

ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿದರು. ಸಾರ್ವಜನಿಕ ಶಿಕ್ಷಕ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಪಂ ಅಧ್ಯಕ್ಷೆ ಸುವರ್ಣ ಹನುಮಂತ ಮಲಾಜಿ ಉದ್ಘಾಟಿಸಿದರು.ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ದೇಶಮುಖ ಎಚ್.ಎಸ್‌. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಬ್ರಹ್ಮಕುಮಾರಿ ಈಶ್ವರಿ ವಿವಿ ಮುಖ್ಯಸ್ಥೆ ವಿಜಯಾ ಅಕ್ಕ, ರಾಷ್ಟ್ರೀಯ ಸಂಯೋಜಕ ಪ್ರೇಮ ಭಾಯಿ ಮತ್ತು ಜಿಲ್ಲೆಯ ಎಲ್ಲ ಎಂಟು ವಲಯಗಳ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next