Advertisement

ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪಡೆಯಿರಿ

09:56 AM Jul 19, 2019 | Naveen |

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸೇರಿದಂತೆ ಎಲ್ಲ ರೈತರಿಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಮೂಲಕ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸುತ್ತಿದ್ದು, ಜಿಲ್ಲೆಯ ರೈತರು ಅದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಕರೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆಯಡಿ ಕಾರ್ಯಕ್ರಮ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೊಗರಿ, ಉದ್ದು, ಹೆಸರು, ಸೋಯಾಬೀನ್‌ ಬಿತ್ತನೆ ಬೀಜಗಳನ್ನು ಪ್ರತಿ ಕಿಲೋ ಗ್ರಾಂ.ಗೆ ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ 37.50 ರೂ. ಸಬ್ಸಿಡಿ ಹಾಗೂ ಇತರೆ ರೈತರಿಗೆ 25 ರೂ. ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ ಎಂದರು.

ಭತ್ತದ ಬಿತ್ತನೆ ಬೀಜವನ್ನು ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ 12 ರೂ. ಸಬ್ಸಿಡಿ ಹಾಗೂ ಇತರೆ ರೈತರಿಗೆ 8 ರೂಪಾಯಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜ ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ 120 ರೂ. ಸಬ್ಸಿಡಿ ಹಾಗೂ ಇತರೆ ರೈತರಿಗೆ 80 ರೂಪಾಯಿ ಸಬ್ಸಿಡಿ ದರದಲ್ಲಿ ದೊರೆಯಲಿವೆ.

ಸಜ್ಜೆ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದ್ದು, ರೈತರು ಬಿತ್ತನೆ ಬೀಜ ಪಡೆಯುವ ಮೂಲಕ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಅವರು ಕೋರಿದ್ದಾರೆ.

Advertisement

ಇದೇ ವೇಳೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆ ಯಾವ ರೀತಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಕೇಳಿದಾಗ, ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ರತೇಂದ್ರನಾಥ ಸೂಗೂರು, 2019-20ನೇ ಸಾಲಿನಲ್ಲಿ ಎಸ್‌ಸಿಪಿ ಯೋಜನೆಯಡಿಯಲ್ಲಿ ಮುಂಗಾರು ಬಿತ್ತನೆ ಬೀಜಕ್ಕಾಗಿ ರಾಜ್ಯ ವಲಯದ ಅನುದಾನದಲ್ಲಿ 2 ಕೋಟಿ ರೂ. ಮೀಸಲಿಡಲಾಗಿದೆ. ಈಗಾಗಲೇ 1.07 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ 1.01 ಕೋಟಿ ರೂ. ಖರ್ಚಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಾರ್ಷಿಕ 20651 ಫಲಾನುಭವಿಗಳ ಗುರಿ ಹೊಂದಲಾಗಿದ್ದು, ಇದುವರೆಗೆ 16004 ಫಲಾನುಭವಿ ರೈತರಿಗೆ 14 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಇದುವರೆಗೆ ಶೇಕಡ 77.50ರಷ್ಟು ಸಾಧನೆ ಮಾಡಲಾಗಿದೆ ಎಂದು ಅಂಕಿ-ಅಂಶ ಸಹಿತ ವಿವರಿಸಿದರು.

ನರೇಗಾದಡಿ ಬೆಕ್‌ ಡ್ಯಾಂ, ಕೃಷಿ ಹೊಂಡ, ಕಂದಕ ಬದುಗಳ ನಿರ್ಮಾಣ ಮುಂತಾದವುಗಳ ಕಾಮಗಾರಿ ನಡೆಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ ನರೇಗಾದಡಿ 10 ಸಾವಿರ ಕಾಮಗಾರಿ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ದಿನವೊಂದಕ್ಕೆ ಕನಿಷ್ಠ 5 ಸಾವಿರ ನಡೆಸಬೇಕು ಎಂದು ತಾಕೀತು ಮಾಡಿದರು.

ತೋಟಗಾರಿಕಾ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ವಿಶೇಷ ಘಟಕ ಯೋಜನೆಗಳ ಪ್ರಗತಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಜಿಲ್ಲೆಯ ರೈತರು ಕೇವಲ ತೊಗರಿ, ಹೆಸರುಗಳಂತಹ ಒಂದೆರೆಡು ಬೆಳೆಗಳ ಬೆಳೆಯಲು ಸೀಮಿತವಾಗದೆ ಲಾಭದಾಯಕ ಫಲ-ಪುಷ್ಪದಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಬೆಳೆದ ಹೂವು ಮತ್ತಿತರ ತೋಟಗಾರಿಕಾ ಉತ್ಪನ್ನಗಳನ್ನು ಹೈದ್ರಾಬಾದ್‌ ಮತ್ತಿತರ ಮಾರುಕಟ್ಟೆಗೆ ಸಾಗಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೊತೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಎಸ್‌ಸಿಪಿ ವಿಶೇಷ ಘಟಕ ಯೋಜನೆಯಡಿ ಹೆಣ್ಣು ಮಕ್ಕಳ ಭಾಗ್ಯಲಕ್ಷಿ ಬಾಂಡ್‌ ವಿತರಣೆ ಗುರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೂರು ತಿಂಗಳಲ್ಲಿ ಕೇವಲ 254 ಫಲಾನುಭವಿಗಳ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಶಿಶುಗಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಎಂದರು.

ಅನುದಾನ ನಿಗದಿತ ಸಮಯಕ್ಕೆ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ ಸರಿಯಾಗಿ ವಿತರಿಸಲಾಗುತ್ತಿಲ್ಲ ಎನ್ನುವ ದೂರು ಇದೆ ಹಾಗೂ ಮಕ್ಕಳಿಗೆ ಬೇಳೆ ಮತ್ತಿತರ ಕಾಳುಗಳ ಪುಡಿಯನ್ನು ಎಂ.ಎಸ್‌.ಪಿ.ಟಿ.ಸಿ. ಸಂಸ್ಥೆಯಿಂದ ನೀಡಲಾಗುತ್ತಿದೆ. ಅವುಗಳನ್ನು ಕಾಳು ರೂಪದಲ್ಲೇ ನೀಡಬೇಕೆಂಬ ಬೇಡಿಕೆ ಇದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಪಿ ರಾಜಾ ಸಭೆಯ ಗಮನಕ್ಕೆ ತಂದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು ವಿವಿಧ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಜಿಲ್ಲೆಯ ಕನಿಷ್ಠ 10 ಹಳ್ಳಿಗಳ ಅಂಗನವಾಡಿ ಕೇಂದ್ರಗಳ ತಪಾಸಣೆ ಮಾಡಿ, ಕಾಳುಗಳ ಪುಡಿಯ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಬೇಕು. ಗುಣಮಟ್ಟ ಸರಿಯಿಲ್ಲದಿದ್ದಲ್ಲಿ ಕಾಳುಗಳ ರೂಪದಲ್ಲೇ ನೀಡಲು ಕ್ರಮಕೈಗೊಳ್ಳೋಣ ಎಂದು ತಿಳಿಸಿದರು.

ಮೊಟ್ಟೆಗಳನ್ನು ಮಕ್ಕಳಿಗೆ ಸಮರ್ಪಕವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ ಟೆಂಡರ್‌ ಕರೆಯಲು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ವಿವಿಧ ತರಬೇತಿ, ಸ್ವಯಂ ಉದ್ಯೋಗ ಕೈಗೊಳ್ಳಲು ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ನೀಡುತ್ತಾರೆ. ಎಲ್ಲಾ ಇಲಾಖೆಗಳು ನೀಡುವ ತರಬೇತಿ ಹಾಗೂ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಕೌಶಾಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಯಾವುದೇ ಇಲಾಖೆ ಅಭ್ಯರ್ಥಿಗೆ ತರಬೇತಿ ನೀಡುವ ಮುನ್ನ, ಕೌಶಲ್ಯಾಭಿವೃದ್ಧಿ ಇಲಾಖೆ ವೆಬ್‌ಸೈಟ್‌ನಲ್ಲಿ ಆ ಅಭ್ಯರ್ಥಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಒಂದು ವೇಳೆ ಆಗಿರದಿದ್ದಲ್ಲಿ ನೋಂದಣಿ ಮಾಡಿಸಿ, ತರಬೇತಿ ನೀಡಬೇಕು ಎಂದು ಸೂಚಿಸಿದರು.

ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಅಧಿನಿಯಮ-2013ರ ಪ್ರಕಾರ ಆಯಾ ವರ್ಷದ ಅನುದಾನ ಅದೇ ವರ್ಷವೇ ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಸತೀಶ್‌ ಅವರು, ಎಸ್‌ಸಿಪಿ-ಟಿಎಸ್‌ಪಿ ವಿಶೇಷ ಘಟಕ ಯೋಜನೆಗಳ ಅಡಿಯಲ್ಲಿ 2018-19 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಕಡ 95.45ರಷ್ಟು ಗುರಿ ಸಾಧಿಸಲಾಗಿದೆ. ಇನ್ನು 2019-20ನೇ ಸಾಲಿನಲ್ಲಿ ಜೂನ್‌ ಅಂತ್ಯದವರೆಗೆ ಶೇ.15.31ರಷ್ಟು ಸಾಧನೆ ತೋರಲಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ತಮ್ಮ-ತಮ್ಮ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ವಿಶೇಷ ಘಟಕ ಯೋಜನೆಗಳ ಅನುಷ್ಠಾನ ಮಾಡಿರುವ ವರದಿಯನ್ನು ವೆಬ್‌ಸೈಟ್ //www.scsptsp.kar.nic.in ನಲ್ಲಿ ನಿರಂತರವಾಗಿ ಮಾಹಿತಿ ದಾಖಲಿಸಬೇಕು. ಯಾವ ಯೋಜನೆ, ಫಲಾನುಭವಿಗಳ ಹೆಸರು, ಆಧಾರ್‌ ಕಾರ್ಡ್‌ ಸಂಖ್ಯೆ, ಮೊಬೈಲ್ ನಂಬರ್‌, ಫಲಾನುಭವಿಗಳಿಗೆ ನೀಡಿರುವ ಸಬ್ಸಿಡಿ ಮುಂತಾದವುಗಳನ್ನು ಚಾಚೂ ತಪ್ಪದೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next