Advertisement

ವಾಣಿಜ್ಯ ಅಂಗಡಿ-ಮಳಿಗೆ ತೆರೆಯಲು ಸಡಿಲಿಕೆ: ಜಿಲ್ಲಾಧಿಕಾರಿ

11:51 AM May 07, 2020 | Naveen |

ಕಲಬುರಗಿ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನಗಳನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲಾದ್ಯಂತ ಕಂಟೇನ್‌ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಬುಧವಾರ ಮತ್ತೆ ಕೆಲವೊಂದು ವಾಣಿಜ್ಯ ಅಂಗಡಿ ಮತ್ತು ಮಳಿಗೆಗಳನ್ನು ತೆರೆಯಲು ಸಡಿಲಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

Advertisement

ವಾಣಿಜ್ಯ ಅಂಗಡಿ ಹಾಗೂ ಮಳಿಗೆಗಳಲ್ಲಿ ಜಿಲ್ಲಾದ್ಯಂತ ಕನಿಷ್ಠ ಸಿಬ್ಬಂದಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಹ್ಯಾಂಡ್‌ ವಾಶ್‌, ಸ್ಯಾನಿಟೈಸರ್‌ ಹಾಗೂ ಮಾಸ್ಕ್ ಬಳಸುವ ಷರತ್ತುಗೊಳಪಟ್ಟು ಮಳಿಗೆಗಳನ್ನು ತೆರೆಯಲು ಅನುಮತಿ ಇದೆ. ಇದಲ್ಲದೇ ಎಲ್ಲ ತರಹದ ಹೊಟೇಲ್‌ಗ‌ಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಸಿಬ್ಬಂದಿಯೊಂದಿಗೆ ಪಾರ್ಸಲ್‌ ವ್ಯವಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಬಟ್ಟೆ ಅಂಗಡಿ, ಬಂಗಾರ, ಬಾಂಡೆ ಅಂಗಡಿ, ಮೊಬೈಲ್‌ ರಿಚಾರ್ಜ್‌ ಸೆಂಟರ್‌, ಬೇಕರಿ, ಎಲೆಕ್ಟ್ರಾನಿಕ್ಸ್‌ ಶಾಪ್‌ ಮತ್ತು ಹೋಮ್‌ ಅಪ್ಲಾಯನ್ಸ್‌, ಬುಕ್‌ ಸ್ಟಾಲ್‌, ಸ್ಟೇಷನರಿ ಅಂಗಡಿ, ಹಾರ್ಡ್‌ವೇರ್‌, ಪೇಂಟ್‌ ಅಂಗಡಿ, ಆಟೋಮೋಬೈಲ್‌ ಅಂಗಡಿ ಹಾಗೂ ಕಂಪ್ಯೂಟರ್
(ಸಾಫ್ಟವೇರ್‌ ಹಾಗೂ ಹಾರ್ಡ್‌ ವೇರ್‌) ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇನ್ನು, ಮಾಲ್‌, ಮಲ್ಟಿಪ್ಲೆಕ್ಸ್‌, ಸಿನಿಮಾ ಚಿತ್ರಮಂದಿರ, ಲಾಡ್ಜ್ಗಳು ತೆರೆಯಲು ಅನುಮತಿ ಇರುವುದಿಲ್ಲ. ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಮುಂದೂವರಿಸಲಾಗಿದೆ. ಹೇರ್‌ ಕಟಿಂಗ್‌ ಸಲೂನ್‌ ಅಂಗಡಿಗಳು, ಮಸಾಜ್‌ ಸೆಂಟರ್ಸ್‌, ಈಜುಕೊಳಗಳು, ಜಿಮ್‌ಗಳನ್ನು ತೆರೆಯುವಂತಿಲ್ಲ ಎಂದು ಡಿಸಿ ಸೂಚಿಸಿದ್ದಾರೆ. ಕಿರಾಣಿ ಅಂಗಡಿ, ಪಾನ್‌ ಅಂಗಡಿಗಳಲ್ಲಿ ಬೀಡಿ, ಸಿಗರೇಟ್‌, ಗುಟಕಾ, ಪಾನ್‌ ಬೀಡಾಗಳ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕರು ಪಾನ್‌ ಬೀಡಾಗಳನ್ನು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಸಹ ನಿಷೇಧಿಸಲಾಗಿದೆ. ಅನಾವಶ್ಯಕ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಮತಿ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next