Advertisement

ಸ್ಮಶಾನ ಭೂಮಿ ಗುರುತಿಸಿ

09:51 AM Jun 29, 2019 | Naveen |

ಕಲಬುರಗಿ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಸಮುದಾಯದವರಿಗೆ ಸ್ಮಶಾನ ಭೂಮಿ ನೀಡುವ ಸಂಬಂಧ ಸರ್ಕಾರಿ ಜಮೀನು ಗುರುತಿಸಿ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಆ ಜಮೀನು ಖರೀದಿಸಿ ಸರ್ಕಾರದ ನಿಯಮಾವಳಿಯನ್ವಯ ಎಸ್‌.ಸಿ.ಎಸ್‌.ಟಿ. ಸಮುದಾಯಗಳಿಗೆ ನೀಡಬಹುದಾಗಿದೆ. ಈ ಕುರಿತು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯ ವಾಸಿಸುವ ಓಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೋರವೆಲ್ ಕೊರೆಸಿ ಸಮಸ್ಯೆ ಬಗೆಹರಿಸಬೇಕು. ಗ್ರಾಮಸ್ಥರ ಬೇಡಿಕೆಯಂತೆ ಮಳ್ಳಿಯಲ್ಲಿ ನೂತನ ಪಡಿತರ ಅಂಗಡಿ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಚಿಂಚೋಳಿ ತಾಲೂಕಿನ ಕೊಂಚಾವರಂ ಮತು ಮಗ್ಧಂಪುರ ಗ್ರಾಮದಲ್ಲಿ ಡಾ| ಬಾಬು ಜಗಜೀವನ ರಾಮ್‌ ಸಮುದಾಯ ಭವನ ಸ್ಥಾಪನೆಗೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರ ಬೇಡಿಕೆಯನ್ವಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ. ಸತೀಶಕುಮಾರ ಮಾತನಾಡಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣ ಮತು ಇಂದಿನ ಸ್ಥಿತಿಗತಿ ಬಗ್ಗೆ ವಿವರಿಸಿ, 2019-20ನೇ ಸಾಲಿನಲ್ಲಿ ದಾಖಲಾದ 46 ಮತ್ತು ಹಿಂದಿನ ಸಾಲಿನ ಬಾಕಿ 3 ಪ್ರಕರಣ ಸೇರಿದಂತೆ ಪರಿಹಾರ ಕೋರಿ ಬಂದ ಒಟ್ಟಾರೆ 49 ಪ್ರಕರಣಗಳಲ್ಲಿ 39 ಪ್ರಕರಣಗಳನ್ನು ವಿಲೇವಾರಿ ಮಾಡಿ 52.62 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

2019-20ನೇ ಸಾಲಿನಿಂದ ಪರಿಹಾರ ಕೋರಿ ಬರುವ ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಪರಿಹಾರ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜಿಲ್ಲೆಯ 538 ಗ್ರಾಮಗಳಲ್ಲಿ ಎಸ್‌.ಸಿ.-ಎಸ್‌.ಟಿ. ಸಮುದಾಯದವರಿಗೆ ಸ್ಮಶಾನ ಭೂಮಿ ಇರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಚಿಂಚೋಳಿ ಎ.ಎಸ್‌.ಪಿ. ಅಕ್ಷಯ ಮಾಕೆ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಚನ್ನಪ್ಪ ಆರ್‌. ಸುರಪುರ, ಸಿದ್ಧಾರೂಡ ಸಮತಾ ಜೀವನ, ಅನೀಲ ಕುಮಾರ ವಿಠ್ಠಲ ಜಾಧವ, ರಾಮಲಿಂಗ ಎನ್‌. ಭೋಸಲೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ರೇವಣಸಿದ್ಧಪ್ಪ, ಉಪ ವಿಭಾಗದ ಡಿ.ವೈ.ಎಸ್‌.ಪಿ.ಗಳು, ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇದ್ದರು.

ಖಾನಾವಳಿ ಮಾಲೀಕರ ಮೇಲೆ ಕೇಸ್‌
ಐವಾನ್‌-ಎ-ಶಾಹಿ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಭಂಗಿ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಶಿವಾಜಿ ಮರಾಠಾ ಖಾನಾವಳಿ ಮಾಲೀಕರು ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆಯಂತೆ ಸದರಿ ಖಾನಾವಳಿ ಮುಖ್ಯಸ್ಥರ ಮೇಲೆ ಜೂ. 27 ರಂದು ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
•ಆರ್‌. ವೆಂಕಟೇಶಕುಮಾರ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next