Advertisement

ಮತದಾನ ಬಹಿಷ್ಕಾರಕ್ಕೆ ನಿರ್ಧಾರ

04:43 PM Apr 10, 2019 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭೆಗೆ ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ತಾಲೂಕಿನ ಹರಗಿನಡೋಣಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದಂತೆ ಇದೀಗ ಮತ್ತೊಂದು ಗ್ರಾಮದ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

Advertisement

ಶತಮಾನದ ಹಿನ್ನೆಲೆಯುಳ್ಳ ಜಿಲ್ಲೆಯ ಶ್ರೀರಾಮರಂಗಾಪುರ ಗ್ರಾಮ ಈವರೆಗೂ ಕಂದಾಯ ಗ್ರಾಮ ವನ್ನಾಗಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲೂ ಈ ನಿರ್ಣಯ ಕೈಗೊಳ್ಳಲು ಸಜ್ಜಾಗಿದ್ದಾರೆ.

ಕಳೆದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ತಾಲೂಕಿನ ಹರಗಿನಡೋಣಿ ಗ್ರಾಮಸ್ಥರು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಮತದಾನವನ್ನು ಬಹಿಷ್ಕರಿಸಿದ್ದರು. ಮೂರು ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಹರಗಿನಡೋಣಿ ಗ್ರಾಮದಲ್ಲಿ ಉಪಚುನಾವಣೆಯಲ್ಲಿ ಮೂರು ಮತಗಟ್ಟೆಗಳನ್ನು ವ್ಯವಸ್ಥೆ ಮಾಡಿ, ಚುನಾವಣೆಯಂದು ಮತಯಂತ್ರಗಳೊಂದಿಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದರೂ, ಗ್ರಾಮದಿಂದ ಒಬ್ಬರೂ ಸಹ ಮನೆಯಿಂದ ಹೊರಬಂದು ಮತದಾನ ಹಾಕದೆ ಬಹಿಷ್ಕರಿಸಿದ್ದರು. ಮತದಾನ ದಿನಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.

ಇದೀಗ ಕಂಪ್ಲಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಜಿಲ್ಲೆಯ ಸುಗ್ನಳ್ಳಿಕೊಟ್ಟಾಲ್‌ (ಶ್ರೀರಾಮರಂಗಾಪುರ) ಗ್ರಾಮದ ಗ್ರಾಮಸ್ಥರು
ಸಹ ಹರಗಿನಡೋಣಿ ಗ್ರಾಮಸ್ಥರ ಹಾದಿಯನ್ನೇ ತುಳಿಯುತ್ತಿದ್ದು,
ಈ ಕುರಿತು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದ ಗ್ರಾಮಸ್ಥರು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡದಿದ್ದರೆ, ಸದ್ಯ ನಡೆಯುತ್ತಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಸಂಸದ, ಶಾಸಕರು ವಾಸಿಸಿದ ಗ್ರಾಮ: ಜಿಲ್ಲೆಯ ಕಂಪ್ಲಿ ತಾಲೂಕು, ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಶ್ರೀರಾಮರಂಗಾಪುರದಲ್ಲಿ ಮಾಜಿ ಶಾಸಕರು, ಸಂಸದರು ಸೇರಿ ಇತರೆ ಜನಪ್ರತಿನಿಧಿಗಳು ವಾಸಿಸಿದ್ದಾರೆ.

Advertisement

ಹೊಸಪೇಟೆ (ಇಂದಿನ ವಿಜಯನಗರ ಕ್ಷೇತ್ರ)ಯ ಮಾಜಿ ಶಾಸಕ ಭೀಮನೇನಿ ಕೊಂಡಯ್ಯ, ಹೊಸಪೇಟೆ ತಾಪಂ ಅಧ್ಯಕ್ಷ ಸೂರ್ಯನಾರಾಯಣ ಇದೇ ಗ್ರಾಮದವರಾಗಿದ್ದಾರೆ. ಮೆಟ್ರಿ ಜಿಪಂನ ಹಾಲಿ ಸದಸ್ಯೆ ನಾರಮ್ಮ ಸಹ ಇದೇ ಗ್ರಾಮದವರಾಗಿದ್ದಾರೆ. ಅಲ್ಲದೆ, ಗ್ರಾಮದ ದರೂರು ಪುಲ್ಲಯ್ಯ ಎನ್ನುವವರು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಂಸದರಾಗಿಯೂ ಆಯ್ಕೆಯಾಗಿದ್ದರು. ಇಷ್ಟೆಲ್ಲ ರಾಜಕೀಯ ಮುಖಂಡರ ಹಿನ್ನೆಲೆಯುಳ್ಳ ಶ್ರೀರಾಮರಂಗಾಪುರ ಗ್ರಾಮವನ್ನು ಈವರೆಗೂ ಕಂದಾಯ ಗ್ರಾಮಗಳ ಪಟ್ಟಿಯಲ್ಲಿ ಸೇರದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮದ ಕೇಶವನಾಯುಡು.

ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಶ್ರೀರಾಮರಂಗಾಪುರ ಗ್ರಾಮವನ್ನು ಸದ್ಯ ಸುಗ್ಗೇನಹಳ್ಳಿ ಕೊಟ್ಟಾಲ್‌ ಎಂದು ಕರೆಯುತ್ತಾರೆ. ಬಹುತೇಕವಾಗಿ ದಶಕಗಳ ಹಿಂದೆಯೇ ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದವರೇ ಗ್ರಾಮದಲ್ಲಿ ವಾಸವಾಗಿದ್ದಾರೆ. 9 ಗ್ರಾಪಂ ಸದಸ್ಯರನ್ನು ಹೊಂದಿದೆ. ಕಂದಾಯ ಗ್ರಾಮವಾದರೆ, ಗ್ರಾಮವನ್ನು ಜಿಲ್ಲಾಡಳಿತ ಗುರುತಿಸಿದಂತಾಗಲಿದೆ. ಕಂದಾಯ ಗ್ರಾಮಗಳ ಪಟ್ಟಿಯಲ್ಲಿ ಸೇರಿದಂತಾಗಲಿದ್ದು, ಇನ್ನಷ್ಟು ಸೌಲಭ್ಯಗಳು ದೊರೆಯಲಿವೆ. ಅಂಚೆ ಕಚೇರಿ, ಬ್ಯಾಂಕ್‌ ಸೌಲಭ್ಯಗಳನ್ನು ಗ್ರಾಮದಲ್ಲೇ ಪಡೆಯಲು ಅನುಕೂಲವಾಗಲಿದೆ. ಆದ್ದರಿಂದ ಶ್ರೀರಾಮರಂಗಾಪುರ ಗ್ರಾಮವನ್ನು ಕೂಡಲೇ ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಆದ್ದರಿಂದ ಗ್ರಾಮವನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಲು ಇನ್ನಷ್ಟು ದಿನಗಳು ವಿಳಂಬ ಮಾಡದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿರ್ಣಯ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಗೆ ಇದೇ ಏ.23 ರಂದು ನಡೆಯಲಿರುವ ಮತದಾನವನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು, ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಶ್ರೀರಾಮ ರಂಗಾಪುರ ಗ್ರಾಮವನ್ನು ಕಂದಾಯ ಗ್ರಾಮಗಳ ಪಟ್ಟಿಯಲ್ಲಿ ಸೇರಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಕಂದಾಯ ಗ್ರಾಮವಾದರೆ, ಗ್ರಾಮಕ್ಕೆ ಇನ್ನಷ್ಟು ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಶ್ರೀರಾಮರಂಗಾಪುರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಿಸಲಾಗುವುದು.
ವೆಂಕಟೇಶಲು, ಚಿನ್ನಹನುಮಂತು, ಕೇಶವನಾಯುಡು, ಪುಲ್ಲಯ್ಯ, ರಾಘವೇಂದ್ರ,
ಶ್ರೀರಾಮರಂಗಾಪುರ ಗ್ರಾಮದ ಗ್ರಾಮಸ್ಥರು.

 

Advertisement

Udayavani is now on Telegram. Click here to join our channel and stay updated with the latest news.

Next