Advertisement

ತಪ್ಪಿದ ಆಡಳಿತ ವ್ಯವಸ್ಥೆ: ಸೂಪರ್‌ಸೀಡ್‌ ಕಾರ್ಮೋಡ

11:19 AM Jun 12, 2019 | Naveen |

ವಿಶೇಷ ವರದಿ
ಕಲಬುರಗಿ:
ಸಹಕಾರಿ ಕ್ಷೇತ್ರದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಶಾಸಕ ಎಂ.ವೈ. ಪಾಟೀಲ ರಾಜೀನಾಮೆ ನೀಡಿದ್ದಾರೆ.

Advertisement

ಬ್ಯಾಂಕ್‌ನ ಆಡಳಿತ ನಿರ್ವಹಣೆ ಹಾದಿ ತಪ್ಪಿದ್ದರಿಂದ ರೈತರಿಗೆ ಯಾವುದೇ ಸಹಾಯ ಮಾಡಲಿಕ್ಕೆ ಆಗುತ್ತಿಲ್ಲ ಎಂದ ಮೇಲೆ ರಾಜೀನಾಮೆ ನೀಡುವುದೇ ಒಳಿತು ಎಂದು ತಿಳಿದು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಶಾಸಕರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಸಾಲ ಮನ್ನಾ ಹಣ ಜಮಾ ಎಂದು ತೋರಿಸಲಾಗಿದೆಯೇ ಹೊರತು ರೈತರಿಗೆ ನಯಾಪೈಸೆ ಸಾಲ ನೀಡಲಾಗಿಲ್ಲ. ಈಗ ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಶುರು ಮಾಡಲು ಬೀಜ ಹಾಗೂ ಗೊಬ್ಬರಕ್ಕೆ ಹಣ ಬೇಕಾಗಿದೆ. ಆದರೆ ಸಾಲ ನೀಡಲಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಸೂಪರ್‌ಸೀಡ್‌: ಸಾಲ ಮನ್ನಾದಿಂದ ಬಂದ ಹಣವನ್ನು ರೈತರಿಗೆ ವಿತರಿಸದೇ ಅಪೆಕ್ಸ್‌ ಬ್ಯಾಂಕ್‌ ಸಾಲ ಮರುಪಾವತಿಸಿರುವುದು ಹಾಗೂ ಸಾಲ ವಿತರಣೆ ಜತೆಗೆ ಮನ್ನಾ ಹಣ ಸಮರ್ಪಕ ವಿತರಣೆ ಮಾಡದೇ ಇರುವುದು ಜತೆಗೆ ಪೈಪ್‌ಲೈನ್‌ ಸಾಲ ವಸೂಲಾತಿಯಾಗ ದಿರುವುದು, ಮುಖ್ಯವಾಗಿ ಬಂಗಾರ ಇಲ್ಲದೇ ಸಾಲ ಎತ್ತಿರುವುದು ಸೇರಿದಂತೆ ಇತರ ಆಡಳಿತ ಲೋಪವಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ ತೀವ್ರ ನಷ್ಟದತ್ತ ಸಾಗಿದ್ದು, ಸೂಪರ್‌ಸೀಡ್‌ ಆಗುವ ಹಂತಕ್ಕೆ ಬಂದು ನಿಂತಿದೆ.

ಬ್ಯಾಂಕ್‌ನ ಎಲ್ಲ ಹಂತದ ಆಡಳಿತದಲ್ಲಿ ಲೋಪ ಎಸಗಿದ್ದರಿಂದ ಬ್ಯಾಂಕ್‌ ಅಂದಾಜು 20 ಕೋಟಿ ರೂ.ಗೂ ಹೆಚ್ಚು ನಷ್ಟದಲ್ಲಿರುವುದರ ಜತೆಗೆ ಸಿಬ್ಬಂದಿಗಳ ಸಂಬಳವಾಗದಿರುವ ಮಟ್ಟಿಗೆ ಬ್ಯಾಂಕ್‌ ತಲುಪಿದೆ. ಆದ್ದರಿಂದ ಸೂಪರ್‌ಸೀಡ್‌ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.

Advertisement

ರೈತರ ಹೆಸರಿನ ಮೇಲೆ ಸಾಲ: ಸಾಲ ಮನ್ನಾ ಹೆಸರಿನಲ್ಲಿ ಭಾರಿ ಶೋಷಣೆ ನಡೆದಿದೆ. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಅಮಾಯಕ ರೈತರ ಹೆಸರಿನ ಮೇಲೆ ಸಾಲ ಎತ್ತಲಾಗಿದೆ. ದುರಂತವೆಂದರೆ ಸಾಲ ಮನ್ನಾ ಆಗಿರುವ ಸಾಲವನ್ನು ವಿತರಿಸಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ 50 ಸಾವಿರ ರೂ. ಸಾಲ ಮನ್ನಾ ಜತೆಗೆ ಎರಡನೇ ಸಲದ ಅಂದರೆ ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಒಂದು ಲಕ್ಷ ರೂ. ಸಾಲ ಮನ್ನಾವನ್ನು ರೈತರಿಗೆ ವಿತರಿಸಲಾಗಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆದಾಗ ಎಲ್ಲರ ಬಣ್ಣ ಬಯಲಿಗೆ ಬರುತ್ತದೆ.

ಎರಡು ದಶಕಗಳ ಹಿಂದೆಯೂ ಬ್ಯಾಂಕ್‌ ಸೂಪರ್‌ಸೀಡ್‌ ಆಗಿತ್ತು. ಆಗ ನೀಡಿದ ಸಾಲ ಶೇ. 65ರಷ್ಟು ಬಾರದೇ ದಿವಾಳಿಯತ್ತ ಸಾಗಿದ್ದಲ್ಲದೇ ಬಾಗಿಲು ಹಾಕುವ ಹಂತಕ್ಕೆ ತಲುಪಿತ್ತು. ಅಲ್ಲದೇ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಲೈಸನ್ಸ್‌ ಪಡೆಯದೇ ವಂಚಿತವಾಗಿದ್ದರ ಹಿನ್ನೆಲೆಯಲ್ಲಿ ಬ್ಯಾಂಕ್‌ ಸೂಪರ್‌ ಸೀಡ್‌ ಆಗಿತ್ತು. ಈಗಲೂ 29 ಸಿ ಪ್ರಕಾರ ಬ್ಯಾಂಕ್‌ ಆಡಳಿತಕ್ಕೆ ಅಂಕುಶಗೊಳಿಸಿ ಸೂಪರ್‌ಸೀಡ್‌ಗೊಳಿಸಲು ಮುಂದಾಗಲಾಗಿದೆ ಎನ್ನಲಾಗಿದೆ.

ಸಿಬಿಐ ತನಿಖೆಯಾಗಲಿ
ಅಮಾಯಕ ರೈತರ ಹೆಸರಿನ ಮೇಲೆ ಸಾಲ ಎತ್ತಿ ಹಾಕಿರುವುದು, ಇಲ್ಲದ ಬಂಗಾರದ ಮೇಲೆ ಸಾಲ ನೀಡಿರುವುದು, ಸಾಲ ವಿತರಣೆಯಲ್ಲಿ ಆಗಿರುವ ಲೋಪ ಸಮಗ್ರವಾಗಿ ಪತ್ತೆ ಮಾಡಲು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಲು ಸಿಬಿಐ ತನಿಖೆಯೇ ಸೂಕ್ತವಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next