ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗುರುವಾರ ಐದು ವರ್ಷದ ಮಗು ಸೇರಿದಂತೆ ಮತ್ತೆ ಮೂವರಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಕಲಬುರಗಿ ತಾಲೂಕು, ಅಫಜಲಪುರ ಮತ ಕ್ಷೇತ್ರದ ಕವಲಗಾ (ಬಿ) ಗ್ರಾಮದ ಒಂದು ವರ್ಷದ ಗಂಡು ಮಗುವಿನ ನೇರ ಸಂಪರ್ಕಕ್ಕೆ ಬಂದಿದ್ದ 23 ವರ್ಷದ ಯುವತಿಗೆ ಗುರುವಾರ ಕೊರೊನಾ ಸೋಂಕು ಇರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಈ ಮಗುವಿಗೆ ಸೋಂಕು ತಗುಲಿರುವ ಹಿನ್ನೆಲೆ ಹಾಗೂ ಪ್ರವಾಸ ಪರಿಶೀಲಿಸಿದಾಗ ಇತ್ತೀಚೆಗೆ ಮಗುವಿನೊಂದಿಗೆ ತಂದೆಯೂ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ತಂದೆಗೆ ಸೋಂಕು ಇಲ್ಲ. ಆದರೆ, ಮಗನಿಗೆ ಸೋಂಕು ಬಂದಿದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಸಿಇಒ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.
ಮತ್ತೊಂದು ಮಗುವಿಗೆ ಹೆಮ್ಮಾರಿ: ಕವಲಗಾ (ಬಿ)ದ ಒಂದು ವರ್ಷದ ಗಂಡು ಮಗು ಹಾಗೂ ವಾಡಿ ಪಟ್ಟಣದ ಎರಡು ವರ್ಷದ ಗಂಡು ಮಗುವಿಗೆ ಹೆಮ್ಮಾರಿ ಸೋಂಕು ದೃಢಪಟ್ಟಿದ್ದು, ಗುರುವಾರ ಕಲಬುರಗಿ ನಗರದ ಐದು ವರ್ಷದ ಗಂಡು ಮಗುವಿನಲ್ಲೂ ಕಾಣಿಸಿಕೊಂಡಿದೆ. ಮಂಗಳವಾರ 10 ವರ್ಷದ ಬಾಲಕಿಗೂ ಕೊರೊನಾ ಪತ್ತೆಯಾಗಿತ್ತು. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಘಿ-ಎ-ಜಮಾತ್ ಸಭೆಯಲ್ಲಿ ಪಾಲ್ಗೊಂಡು ಮರಳಿ ಬಂದವರೊಂದಿಗೆ ಸಂಪರ್ಕ ಹೊಂದಿ, ಏ.13ರಂದು ಮೃತಪಟ್ಟ ಬಟ್ಟೆ ವ್ಯಾಪಾರಿಯ ಸಂಪರ್ಕಕ್ಕೆ ಈ ಐದು ವರ್ಷದ ಮಗು ಸಂಪರ್ಕಕ್ಕೆ ಬಂದಿತ್ತು. ಈ ಹಿಂದೆ ಬಟ್ಟೆ ವ್ಯಾಪಾರಿಯ 51 ವರ್ಷದ ಸಹೋದರ ಹಾಗೂ ಸಹೋದರನ ಪುತ್ರಿಯಾದ 10 ವರ್ಷದ ಬಾಲಕಿಗೆ ಸೋಂಕು ಖಚಿತವಾಗಿತ್ತು.
ಬೆಂಗಳೂರಿಂದ ಮರಳಿದ ವ್ಯಕ್ತಿಗೂ ಸೋಂಕು: ಬೆಂಗಳೂರಿನಿಂದ ಮರಳಿದ್ದ 32 ವರ್ಷದ ವ್ಯಕ್ತಿಗೂ ಗುರುವಾರ ಸೋಂಕು ದೃಢಪಟ್ಟಿದೆ. ಮಾ.24ರಂದೇ ನಗರಕ್ಕೆ ಮರಳಿದ್ದ ಈತನನ್ನು ಈ ಹಿಂದೆಯೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಈತನಿಗೆ ಕೋವಿಡ್ ನೆಗೆಟಿವ್ ಎಂದು ಪ್ರಯೋಗಾಲಯದ ವರದಿ ಬಂದಿತ್ತು. ಮಾ.30ರಿಂದ ಈ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಏ.14ರಂದು ಜ್ವರ ಮತ್ತೆ ಕಾಣಿಸಿಕೊಂಡ ಪರಿಣಾಮ ಮತ್ತೂಮ್ಮೆ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿತ್ತು. ಇದೀಗ ಆತನಿಗೆ ಕೊರೊನಾ ಪಾಸಿವಿಟ್ ಇರುವುದು ಖಚಿತವಾಗಿದೆ. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.