ಕಲಬುರಗಿ: ಸತತವಾಗಿ ಎರಡು ದಿನಗಳ ತಲಾ ನೂರು ಕೋವಿಡ್ ಪಾಸಿಟಿವ್ ಪ್ರಕರಣಗಳ ಪತ್ತೆಯಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಗುರುವಾರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಇದರಿಂದ ಜನತೆ ಕೊಂಚ ನಿರಾಳರಾಗುವಂತೆ ಮಾಡಿತ್ತು.
ಮಂಗಳವಾರ 100 ಮತ್ತು ಬುಧವಾರ 105 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟು, ಎರಡೇ ದಿನದಲ್ಲಿ 205 ಪ್ರಕರಣಗಳು ದಾಖಲಾಗಿದ್ದವು. ಇದರೊಂದಿಗೆ ಕೋವಿಡ್ ಸೋಂಕಿತರ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಪ್ರಥಮ ಸ್ಥಾನಕ್ಕೆ ಏರಿತ್ತು. ಗುರುವಾರ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣ ಮತ್ತು ಉಡುಪಿಯಲ್ಲಿ 92 ಪ್ರಕರಣಗಳು ದೃಢಪಟ್ಟಿದ್ದರಿಂದ ಕಲಬುರಗಿ 510 ಪ್ರಕರಣಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದೆ.
564 ಕೋವಿಡ್ ಪ್ರಕರಣಗಳೊಂದಿಗೆ ಉಡುಪಿ ಅಗ್ರ ಸ್ಥಾನದಲ್ಲಿ ಇದೆ. ಜಿಲ್ಲೆಯ 510 ಪ್ರಕರಣಗಳಲ್ಲಿ ಇದುವರೆಗೆ 128 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಏಳು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ 375 ಜನರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
7 ಕಂಟೇನ್ಮೆಂಟ್ ಝೋನ್: ಬುಧವಾರ ಕೋವಿಡ್ ಪತ್ತೆಯಾದ ಸೋಂಕಿರುವ ವಾಸವಿರುವ ಪ್ರದೇಶಗಳಿಂದ ಕೋವಿಡ್ ಸೋಂಕು ಹರಡದಂತೆ ಮನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತೆ 7 ಕಂಟೇನ್ಮೆಂಟ್ ಝೋನ್ ರಚಿಸಲಾಗಿದೆ. ಆ ಪ್ರದೇಶಗಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ -ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.
ನಗರದ ಇಂದಿರಾನಗರಕ್ಕೆ ಜಿಮ್ಸ್ ಆಡಳಿತಾಧಿಕಾರಿ ಪಾರ್ವತಿ, ಅಫಜಲಪುರ ತಾಲೂಕಿನ ಕೋಗನೂರ, ಬಳ್ಳೂರಗಿ ತಾಂಡಾ ಹಾಗೂ ಹೇರೂನಾಯಕ ತಾಂಡಾಗಳಿಗೆ ಅಲ್ಪಸಂಖ್ಯಾತರ ತಾಲೂಕು ವಿಸ್ತೀರ್ಣಾಧಿಕಾರಿ ವಾಜೀದ್ ಮುಖೇನ್, ಸೇಡಂ ತಾಲೂಕಿನ ಕಾನಾಗಡ್ಡಾ ಗ್ರಾಮಕ್ಕೆ ಜಿಪಂ ಇಂಜನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಅಧಿಕಾರಿ ಶರಣಬಸಪ್ಪ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಜೇವರ್ಗಿ ತಾಲೂಕಿನ ಕಲ್ಲೂರ(ಕೆ) ಗ್ರಾಮಕ್ಕೆ ಚಿಗರಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಚ್. ಬೆಣ್ಣೂರ ಹಾಗೂ ಕಮಲಾಪುರ ತಾಲೂಕಿನ ಬಚನಾಳ ತಾಂಡಾಕ್ಕೆ ಪಶು ವೈದ್ಯಕಿಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಕುಮಾರ ಅವರನ್ನು ನೇಮಿಸಲಾಗಿದೆ.