ಕಲಬುರಗಿ: ಕೋವಿಡ್ ಗೆ ದೇಶದಲ್ಲೇ ಮೊದಲ ಬಲಿಯಾದ ಬಿಸಿಲೂರಿನಲ್ಲಿ ಮಹಾಮಾರಿ ಅಟ್ಟಹಾಸ ಮುಂದುವರೆದಿದೆ. ಮಂಗಳವಾರ ಒಂದೇ ದಿನ ಮುಂಬೈನಿಂದ ಆಗಮಿಸಿದ 13 ಜನ ವಲಸೆ ಕಾರ್ಮಿಕರಿಗೆ ಹೆಮ್ಮಾರಿ ವಕ್ಕರಿಸಿದೆ. ಈ ಮೂಲಕ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ.
ಸತತ ಮೂರು ದಿನಗಳಿಂದ ಮುಂಬೈನಿಂದ ಬಂದಿರುವ ವಲಸಿಗರಲ್ಲೇ ಕೋವಿಡ್ ಸೋಂಕು ಪತ್ತೆಯಾಗುತ್ತಿದೆ. ರವಿವಾರ 8 ಜನ, ಸೋಮವಾರ 11 ಮಂದಿಗೆ ಸೋಂಕು ಪತ್ತೆಯಾದರೆ, ಮಂಗಳವಾರ 13 ಜನರಿಗೆ ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ಒಂದು ದಿನದಲ್ಲಿ ಪತ್ತೆಯಾದ ಅತ್ಯಧಿಕ ಸೋಂಕಿತರ ಸಂಖ್ಯೆಯಾಗಿದೆ. ಮಂಗಳವಾರ ಸೋಂಕು ಕಾಣಿಸಿಕೊಂಡವರಲ್ಲಿ ಮೂವರು ಮಕ್ಕಳು ಇದ್ದರೆ, 10 ಜನರು 42 ವರ್ಷದೊಳಗಿರುವ ಸೇರಿದ್ದಾರೆ.
ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 7 ವರ್ಷದ ಬಾಲಕ (ಪಿ-1257), 32 ವರ್ಷದ ಯುವಕ (ಪಿ-1262), 30 ವರ್ಷದ ಯುವತಿ (ಪಿ-1266) ಮತ್ತು ಬುಗಡಿ ತಾಂಡಾದ 42 ವರ್ಷದ ಪುರುಷ (ಪಿ-1258) ಹಾಗೂ 18 ವರ್ಷದ ಯುವತಿ (ಪಿ-1259)ಗೆ ಕೋವಿಡ್ ಸೋಂಕು ಕಂಡುಬಂದಿದೆ. ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 8 ವರ್ಷದ ಬಾಲಕಿ (ಪಿ-1260), 21 ವರ್ಷದ ಯುವತಿ (ಪಿ-1263) ಹಾಗೂ 32 ವರ್ಷದ ಯುವಕ (ಪಿ-1267)ನಿಗೆ ಮಹಾಮಾರಿ ಅಂಟುಕೊಂಡಿದೆ. ಅದೇ ರೀತಿ ಚಿತ್ತಾಪುರ ತಾಲೂಕಿನ ನಾಲವಾರದ 35 ವರ್ಷದ ಮಹಿಳೆ (ಪಿ-1261) ಮತ್ತು 40 ವರ್ಷದ ಪುರುಷ (ಪಿ-1264)ನಲ್ಲೂ ಸೋಂಕು ದೃಢವಾಗಿದೆ.
ಆಳಂದ ತಾಲೂಕಿನ ಧಂಗಾಪೂರ ಗ್ರಾಮ 6 ವರ್ಷದ ಬಾಲಕಿ (ಪಿ-1376) ಮತ್ತು 35 ವರ್ಷದ ಮಹಿಳೆ (ಪಿ-1377) ಗೆ ಕೋವಿಡ್ ಸೋಂಕು ಕಂಡುಬಂದಿದೆ. ಮತ್ತೂಂದು ಪ್ರಕರಣ ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಪಂಚಶೀಲ ನಗರದ 30 ವರ್ಷದ ಮಹಿಳೆ (ಪಿ-1265)ಗೆ ದೃಢಪಟ್ಟಿದೆ. 13 ಜನ ಸೋಂಕಿತರ ಪೈಕಿ ಪಂಚಶೀಲ ನಗರದ ಮಹಿಳೆ ಹೊರತುಪಡಿಸಿ ಉಳಿದೆಲ್ಲ ಕೋವಿಡ್ ಪೀಡಿತರು ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದಾರೆ. ಸೋಂಕು ದೃಢ ಹಿನ್ನೆಲೆಯಲ್ಲಿ ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ ಕೋವಿಡ್ ಸೋಂಕಿತರ 127 ಪೈಕಿ 55 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 7 ಜನರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಉಳಿದಂತೆ 65 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೆ ಇಬ್ಬರು ಗುಣಮುಖ
ಕೋವಿಡ್ ಸೋಂಕಿನಿಂದ ಗುಣಮುಕ್ತರಾಗಿ ಮಂಗಳವಾರ ಮತ್ತೆ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದ ಮಿಲನ್ ಚೌಕ್ ಪ್ರದೇಶದ 35 ವರ್ಷದ ಮಹಿಳೆ (ಪಿ-609) ಮತ್ತು ಮೋಮಿನಪುರ ಪ್ರದೇಶದ 36 ವರ್ಷದ ಮಹಿಳೆ (ಪಿ-641) ಕೋವಿಡ್ ಮುಕ್ತರಾಗಿದ್ದಾರೆ. ಉಸಿರಾಟ ಮತ್ತು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದ ಮಿಲನ್ ಚೌಕ್‌ನ 35 ವರ್ಷದ ಮಹಿಳೆಗೆ ಮೇ 3ರಂದು ಸೋಂಕು ದೃಢಪಟ್ಟಿತ್ತು. ಮೇ 4ರಂದು ಮೋಮಿನಪುರದ ಮಹಿಳೆಗೆ 41 ವರ್ಷದ ವ್ಯಕ್ತಿ (ಪಿ-604) ಸಂಪರ್ಕದಿಂದ ಕೋವಿಡ್ ಹರಡಿತ್ತು.