ಕಲಬುರಗಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಹೊಸದಾಗಿ 14 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,450ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮತ್ತೆ ಎಂಟು ಜನರು ಗುಣಮುಖರಾಗಿ ಬಿಡುಗೊಂಡಿದ್ದು, ಗುಣಮುಖರಾದ ಸಂಖ್ಯೆ 1,103ಕ್ಕೆ ಹೆಚ್ಚಳವಾಗಿದೆ.
ಬಸವೇಶ್ವರ ಆಸ್ಪತ್ರೆಯಲ್ಲಿ ಒಬ್ಬರಿಗೆ ಮತ್ತು ಜ್ವರ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ನಾಲ್ವರು, ಸೋಂಕಿತರ ಸಂಪರ್ಕಕ್ಕೆ ಬಂದ ಐವರು, ಮಹಾರಾಷ್ಟ್ರದಿಂದ ವಾಪಸ್ ಆಗಿರುವ ನಾಲ್ವರು ಹಾಗೂ ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪೈಕಿ ಐವರು ಮಹಿಳೆಯರು, ಒಂಭತ್ತು ಪುರುಷರು ಸೇರಿದ್ದಾರೆ. ನಗರದ ನ್ಯೂ ರಾಘವೇಂದ್ರ ಕಾಲೋನಿಯ 83 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ಬುಲಂದ್ ಪರ್ವೇಜ್ ಕಾಲೋನಿಯ 46 ವರ್ಷದ ಪುರುಷ, ಮಿಜಗುರಿ ಕ್ರಾಸ್‌ನ 32 ವರ್ಷದ ಪುರುಷ, ಬಸವೇಶ್ವರ ಆಸ್ಪತ್ರೆಯ 41 ವರ್ಷದ ಪುರುಷ, ಶಹಾಬಜಾರದ 48 ವರ್ಷದ ಪುರುಷ, ಎಂಎಸ್ ಕೆ ಮಿಲ್ ಪ್ರದೇಶದ 41 ವರ್ಷದ ಪುರುಷ, ಸಿಐಬಿ ಕಾಲೋನಿಯ 21 ವರ್ಷದ ಮಹಿಳೆ, ಕಾಂತಾ ಕಾಲೋನಿಯ 27 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.
ಇಸ್ಲಾಮಾಬಾದ್ ಕಾಲೋನಿಯಲ್ಲಿ 27 ವರ್ಷದ ಪುರುಷ, 46 ವರ್ಷದ ಮಹಿಳೆ ಮತ್ತು 58 ವರ್ಷದ ಪುರುಷನಿಗೆ ಕೋವಿಡ್ ಕಾಣಿಸಿಕೊಂಡಿದೆ. ತಾಲೂಕಿನ ಬಬಲಾದ (ಕೆ) ಗ್ರಾಮದಲ್ಲಿ 45 ವರ್ಷದ ಮಹಿಳೆ ಹಾಗೂ ಆಳಂದ ಪಟ್ಟಣದ 44 ವರ್ಷದ ಪುರುಷ, ಹಿರೋಳ್ಳಿ ಗ್ರಾಮದ 45 ವರ್ಷದ ಮಹಿಳೆಗೆ ಸೋಂಕು ಹರಡಿದೆ. ಇನ್ನು, ಕಲಬುರಗಿ ತಾಲೂಕಿನಲ್ಲಿ ಐವರು, ಆಳಂದ, ಅಫಜಲಪುರ ಮತ್ತು ಯಡ್ರಾಮಿ ತಾಲೂಕಿನಲ್ಲಿ ತಲಾ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 329 ಸಕ್ರಿಯ ರೋಗಿಗಳಿದ್ದು, ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಳಂದ: ತಾಲೂಕಿನ ನಿಂಬರಗಾ ಹೋಬಳಿಯ ಹಿತ್ತಲಶಿರೂರ, ಕವಲಗಾ, ಭೂಸನೂರ, ಸುಂಟನೂರ ಗ್ರಾಮಗಳಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ದಯಾನಂದ ಪಾಟೀಲ ತಿಳಿಸಿದ್ದಾರೆ. ಹಿತ್ತಲಶಿರೂರ ಒಬ್ಬರು, ಕವಲಗಾ ಇಬ್ಬರು, ಭೂಸನೂರನಲ್ಲಿ ಒಬ್ಬರು, ಸುಂಟನೂರನಲ್ಲಿ ಒಬ್ಬರ ಮೇಲೆ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದರಿಂದ ನಿಂಬರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂವರಿಗೆ ಕೋವಿಡ್ : ಕೋವಿಡ್ ಸೋಂಕಿಗೆ ಪಟ್ಟಣದ ಯುವತಿ ಹಾಗೂ ಓರ್ವ ಪುರುಷ ಇತ್ತೀಚೆಗೆ ಮೃತಪಟ್ಟಿದ್ದಾರೆ. ಜೂನ್ 30ರಂದು ಪಟ್ಟಣದ ಶೇರಿಕಾರ ಕಾಲೋನಿ ನಿವಾಸಿ ಸಿದ್ಧಾರ್ಥ ಚೌಕ್‌ನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ 52 ವರ್ಷದ ಪುರುಷ ಹಾಗೂ ಆಶ್ರಯ ಕಾಲೋನಿಯ ನಿವಾಸಿ ಸಾಮಿಲ್‌ನಲ್ಲಿ ಕಾರ್ಮಿಕನಾಗಿದ್ದ 60 ವರ್ಷದ ಪುರುಷನಿಗೆ ಸೋಂಕು ಸೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮತ್ತೊಂದೆಡೆ ಪಟ್ಟಣದ ಹೃದಯ ಭಾಗದ ಹೋಟೆಲ್ ವೊಂದರ ಮಾಲೀಕನ 21 ವರ್ಷದ ಪುತ್ರನಿಗೆ ಸೋಂಕು ಪತ್ತೆಯಾಗಿದೆ. ಈತನ ಪ್ರಥಮ ಸಂಪರ್ಕಕ್ಕೆ ಬಂದಿದ್ದ ಹೋಟೆಲ್ ಕಾರ್ಮಿಕರು ಹಾಗೂ ಅವರ ಕುಟುಂಬದವರ ಗಂಟಲು ದ್ರವ ಪರೀಕ್ಷೆ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ| ಜಿ. ಅಭಯಕುಮಾರ ತಿಳಿಸಿದ್ದಾರೆ.