Advertisement

ರೇಪ್‌ ಆರೋಪಿಗೆ ಕೋವಿಡ್ : ಪೊಲೀಸರಿಗೆ ಭೀತಿ

07:21 PM Jun 24, 2020 | Naveen |

ಕಲಬುರಗಿ: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದ ಪೊಲೀಸರಿಗೂ ಇದೀಗ ಮಹಾಮಾರಿ ಆತಂಕ ಶುರುವಾಗಿದೆ. ಬಂಧಿತ ಅತ್ಯಾಚಾರ ಆರೋಪಿಯೊಬ್ಬನಿಗೆ ಕೋವಿಡ್‌-19 ದೃಢಪಟ್ಟಿರುವುದರಿಂದ ನಗರ ಪೊಲೀಸರಲ್ಲಿ ಭೀತಿ ಹೆಚ್ಚಿಸಿದೆ.

Advertisement

ಹತ್ತು ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷದ ಆರೋಪಿಯನ್ನು ಬಂಧಿಸಲಾಗಿತ್ತು. ಪೋಸ್ಕೊ ಪ್ರಕರಣವಾಗಿದ್ದರಿಂದ ಆರೋಪಿಯನ್ನು ನಗರ ಮಹಿಳಾ ಠಾಣೆ ಪೊಲೀಸರು ಬಂಧಿಸಿ ಜೂ.18ರಂದು ಠಾಣೆಗೆ ಕರೆತಂದಿದ್ದರು. ನಂತರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಅಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಪಿಯ ಗಂಟಲು ದ್ರಾವಣ ಮಾದರಿ ಸಂಗ್ರಹಿಸಿ, ಐಸೋಲೇಷನ್‌ ಮಾಡಲಾಗಿತ್ತು. ಸೋಮವಾರ ಪ್ರಯೋಗಾಲಯದಿಂದ ವರದಿ ಬಂದಿದ್ದು,
ಆರೋಪಿ (ಪಿ-9372)ಗೆ ಕೊರೊನಾ ಪಾಸಿಟಿವ್‌ ಎಂದು ದೃಢಪಟ್ಟಿದೆ.

ಕೋವಿಡ್ ಭೀತಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಇಷ್ಟು ದಿನ ಆರೋಪಿಗಳನ್ನು ಬಂಧಿಸದೆ, ಕೇವಲ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಜಾಗ್ರತೆ ವಹಿಸಿದ್ದರು. ಲಾಕ್‌ಡೌನ್‌ ಸಡಿಲಿಕೆ ನಂತರ ಕೊಲೆ, ಪೋಸ್ಕೊದಂತಹ ಗಂಭೀರ ಪ್ರಕರಣಗಳು ನಡೆಯುತ್ತಿರುವುದರಿಂದ ಆರೋಪಿಗಳನ್ನು ಬಂಧಿಸಲು ಶುರು ಮಾಡಿದ್ದರು. ಇದರ ಬೆನ್ನೆಲ್ಲೇ ಅತ್ಯಾಚಾರಿ ಆರೋಪಿಗೆ ಸೋಂಕು ಪತ್ತೆಯಾಗಿದೆ. ಇವನಿಗೆ ಕಂಟೇನ್ಮೆಂಟ್‌ ಝೋನ್‌ ಸಂಪರ್ಕದಿಂದ ಕೋವಿಡ್ ಅಂಟಿದೆ ಎಂದು ತಿಳಿದುಬಂದಿದ್ದು, ಹಿನ್ನೆಲೆ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

13 ಪೊಲೀಸರು ಕ್ವಾರಂಟೈನ್‌: ಆರೋಪಿಗೆ ಕೊರೊನಾ ಖಚಿತವಾಗುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ನಗರ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಸೇರಿ ಒಟ್ಟು 13 ಸಿಬ್ಬಂದಿಗಳನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿದೆ. ಪೊಲೀಸ್‌ ಠಾಣೆ ಮತ್ತು ವಾಹನಗಳನ್ನು ಸ್ಯಾನಿಟೈಜರ್‌ ಮಾಡಿ ಸ್ವಚ್ಛಗೊಳಿಸಲಾಗಿದೆ. ಕಾರಾಗೃಹದಲ್ಲಿ ಆರೋಪಿಯನ್ನು ಐಸೋಲೇಷನ್‌ದಲ್ಲಿ ಇಟ್ಟಿದ್ದರಿಂದ ಅಲ್ಲಿನ ಸಿಬ್ಬಂದಿಗೆ ಯಾವುದೇ ಆತಂಕವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶ ಕುಮಾರ ಖಚಿತ ಪಡಿಸಿದ್ದಾರೆ.

48 ಜನ ಗುಣಮುಖ: ಜಿಲ್ಲೆಯಲ್ಲಿ ಮಂಗಳವಾರ 48 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬೀದರ ಮತ್ತು ಯಾದಗಿರಿ ಜಿಲ್ಲೆಯ ತಲಾ ಓರ್ವ ರೋಗಿ ಸೇರಿದಂತೆ ಒಟ್ಟು 48 ಜನ ಬಿಡುಗಡೆಯಾಗಿದ್ದಾರೆ. ಚಿಂಚೋಳಿ ತಾಲೂಕಿನ 1, ಕಾಳಗಿ ತಾಲೂಕಿನ 2, ಕಮಲಾಪುರ ತಾಲೂಕಿನ 7, ಚಿತ್ತಾಪುರ ತಾಲೂಕಿನ 8, ಅಫಜಲಪುರ ತಾಲೂಕಿನ 3, ಕಲಬುರಗಿ ತಾಲೂಕಿನ 8, ಆಳಂದ ತಾಲೂಕಿನ 14, ಕಲಬುರಗಿ ನಗರದ 3 ಜನ ಸೋಂಕಿತರು ಗುಣಮುಖರಾಗಿದ್ದಾರೆ.

Advertisement

ಬಂಧಿತ ಅತ್ಯಾಚಾರ ಆರೋಪಿಗೆ ಕೋವಿಡ್ ಸೋಂಕು ತಗುಲಿದ್ದು ನಿಜ. ಆದರೆ, ಠಾಣೆ ಸಿಬ್ಬಂದಿ ಅಂತರ ಕಾಪಾಡಿಕೊಂಡಿದ್ದಾರೆ. ಸುರಕ್ಷತಾ ಕ್ರಮ ಅನುಸರಿಸಿದ್ದಾರೆ. ಹೀಗಾಗಿ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡುವುದಿಲ್ಲ. ಯಾವುದೇ ರೀತಿಯ ಆತಂಕವೂ ಇಲ್ಲ. ಅಲ್ಲದೇ ಇನ್ಸ್‌ಪೆಕ್ಟರ್‌ ಸೇರಿ ಒಟ್ಟು 13 ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅವರ ಗಂಟಲು ದ್ರಾವಣ ಮಾದರಿ ಸಂಗ್ರಹಿಸಿ ಪ್ರಾಯೋಗಾಲಯಕ್ಕೆ ರವಾನಿಸಲಾಗಿದೆ.
ಎನ್‌. ಸತೀಶ ಕುಮಾರ,
ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next