ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಶನಿವಾರ 9 ತಿಂಗಳ ಮಗು ಸೇರಿ ಮತ್ತೆ 34 ಜನರಿಗೆ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಜಿಲ್ಲಾದ್ಯಂತ 42 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 25 ಜನರು, ಪಾಸಿಟಿವ್ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಐವರು, ಸೋಂಕಿನ ಮೂಲವೇ ಪತ್ತೆಯಾಗದ ಇಬ್ಬರು, ಬೆಂಗಳೂರು ಮತ್ತು ಯಾದಗಿರಿ ಪ್ರವಾಸ ಹಿನ್ನೆಲೆಯಲ್ಲಿ ತಲಾ ಒಬ್ಬರಿಗೆ ವೈರಾಣು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,160ಕ್ಕೆ ಏರಿಕೆಯಾಗಿದೆ. ಇದುವರೆಗೆ 688 ಕೊರೊನಾ ಪೀಡಿತರು ಬಿಡುಗಡೆಗೊಂಡತೆ ಆಗಿದೆ. ಉಳಿದಂತೆ 461 ಸೋಂಕಿತರಿಗೆ ಐಸೋಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಫಜಲಪುರ ತಾಲೂಕಿನಲ್ಲಿ ಅತಿಹೆಚ್ಚು 14 ಪ್ರಕರಣಗಳು ದೃಢಪಟ್ಟಿವೆ. ದೇವಲ ಗಾಣಗಾಪುರದಲ್ಲಿ 9 ತಿಂಗಳ ಹೆಣ್ಣು ಮಗು, ಎರಡು ವರ್ಷದ ಬಾಲಕಿ, 27 ವರ್ಷದ ಮಹಿಳೆ, 31 ವರ್ಷದ ಪುರುಷ, 30 ವರ್ಷದ ಪುರುಷ, 24 ವರ್ಷದ ಮಹಿಳೆ, 28 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಜೇವರ್ಗಿ ಬಿ ಗ್ರಾಮದಲ್ಲಿ 9 ವರ್ಷದ ಬಾಲಕಿ, 45 ವರ್ಷದ ಮಹಿಳೆ, ಗೌರ್ ಬಿ ಗ್ರಾಮದಲ್ಲಿ 8 ವರ್ಷದ ಬಾಲಕ, 10 ವರ್ಷದ ಬಾಲಕ, 40 ವರ್ಷದ ಮಹಿಳೆ, 44 ವರ್ಷದ ಪುರುಷ ಹಾಗೂ ನೀಲೂರ ಗ್ರಾಮದಲ್ಲಿ 21 ವರ್ಷದ ಮಹಿಳೆಗೆ ಕೊರೊನಾ ಖಚಿತವಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಮರಳಿ ಬಂದವರೇ ಆಗಿದ್ದಾರೆ.
ಕಲಬುರಗಿ ನಗರ ವ್ಯಾಪ್ತಿಯಲ್ಲಿ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪಿ-7903 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇಸ್ಲಾಮಾಬಾದ್ ಕಾಲೋನಿಯ ನಾಲ್ವರಿಗೆ ವೈರಾಣು ಹರಡಿದೆ. ಮೂವರು ಮಹಿಳೆಯರು ಹಾಗೂ 62 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಸುಂದರ ನಗರದ 24 ವರ್ಷದ ಮಹಿಳೆಗೆ ಪಿ-8271 ಸೋಂಕಿತನಿಂದ ಕೊರೊನಾ ಅಂಟಿದೆ. ಬೆಂಗಳೂರಿನ ಆಗಮಿಸಿದ ವಿಭೂತಿ ನಗರದ 19 ವರ್ಷದ ಯುವಕನಿಗೂ ಸೋಂಕು ಪತ್ತೆಯಾಗಿದೆ. ಜಗತ್ ಬಡಾವಣೆಯ 40 ವರ್ಷದ ಮಹಿಳೆ, ಮಿಲ್ಲತ್ ನಗರದ 10 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿದೆ. ಆದರೆ, ಇವರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಚಿತ್ತಾಪುರ ತಾಲೂಕಿನಲ್ಲಿ 6 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಮಾಲಗತ್ತಿಯ ದಾಸ ನಗರದ 60 ವರ್ಷದ ಅಜ್ಜ-ಅಜ್ಜಿ, ರಾವೂರಿನ ಅಂಬಾಭವಾನಿ ಗುಡಿ ಸಮೀಪದ 40 ವರ್ಷದ ಮಹಿಳೆ, 50 ವರ್ಷದ ಪುರುಷ, 22 ವರ್ಷದ ಮಹಿಳೆ, ಹಾಗೂ ಹಳ್ಳಕಟ್ಟಿದ 9 ಬಾಲಕನಿಗೆ ಕೋವಿಡ್ ದೃಢಪಟ್ಟಿದೆ. ಸೇಡಂ ತಾಲೂಕಿನ ಮೋಮಿನಪುರದ 32 ವರ್ಷದ ಪುರುಷ, ಖಂಡೇರಾಯನಪಲ್ಲಿ 53 ವರ್ಷದ ಮಹಿಳೆ, 55 ವರ್ಷದ ಪುರುಷ ಹಾಗೂ ಶಹಾಬಾದ್ ನ 19 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ.