ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸೋಂಕಿನಿಂದ ಮೃತ ಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಬುಧವಾರ ಮತ್ತೊಬ್ಬ ವ್ಯಕ್ತಿ ಮಹಾಮಾರಿ ರೋಗದಿಂದ ಸಾವನ್ನಪ್ಪಿರುವುದು ದೃಢವಾಗಿದ್ದು, ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ನಗರದ ರಿಂಗ್ ರೋಡ್ ಬಳಿ ಮಹಾರಾಜ ಹೋಟೆಲ್ ಪ್ರದೇಶದ 56 ವರ್ಷದ ವ್ಯಕ್ತಿ (ಪಿ-23277) ಜು.5ರಂದು ಮೃತಪಟ್ಟಿದ್ದು, ಇವರ ಕೋವಿಡ್ ಪತ್ತೆಯ ಪರೀಕ್ಷೆ ವರದಿ ಬುಧವಾರ ಬಂದಿದೆ. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಅಧಿಕ ರಕ್ತದೊತ್ತದ, ಮಧುಮೇಹ ಹಾಗೂ ಹೃದ್ರೋಗ ಸಮಸ್ಯೆಯಿಂದ ಇವರು ಬಳಲುತ್ತಿದ್ದರು. ಹೀಗಾಗಿ ಇವರನ್ನು ಜಿಮ್ಸ್ ಆಸ್ಪತ್ರೆಗೆ ಜು.5ರಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೆ ಅದೇ ದಿನ ಅಸುನೀಗಿದ್ದಾರೆ. ಮೃತ ವ್ಯಕ್ತಿ ಸೇರಿ ಒಟ್ಟು 66 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಜ್ವರ ಮತ್ತು ಉಸಿರಾಟ ಸಮಸ್ಯೆ ಹಿನ್ನೆಲೆಯ 24 ಜನರು, ರ್‍ಯಾಂಡಮ್ ಪರೀಕ್ಷೆಯಲ್ಲಿ 23 ಮಂದಿ ಮತ್ತು ಸೋಂಕಿತರ ನೇರ ಸಂಪರ್ಕಕ್ಕೆ ಬಂದ 8 ಜನರು ಹಾಗೂ ಮಹಾರಾಷ್ಟ್ರದಿಂದ ಬಂದಿರುವ 8 ಮಂದಿ, ತೆಲಂಗಾಣ ಪ್ರವಾಸ ಹಿನ್ನೆಲೆಯ ಇಬ್ಬರು, ಬೀದರ್ ಜಿಲ್ಲೆಯ ಚಿಟಗುಪ್ಪದ ಓರ್ವ ವ್ಯಕ್ತಿಗೆ ಕೋವಿಡ್ ವಕ್ಕರಿಸಿದೆ.
ಕಲಬುರಗಿ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲೇ 43 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೇಡಂ-8, ಚಿತ್ತಾಪುರ-5, ಯಾಡ್ರಾಮಿ-3, ಆಳಂದ, ಕಾಳಗಿ, ಅಫಜಲಪುರ ತಾಲೂಕಿನಲ್ಲಿ ತಲಾ ಬಬ್ಬರಿಗೆ ಮಹಾಮಾರಿ ಕಾಣಿಸಿಕೊಂಡಿದೆ. ಇದರಲ್ಲಿ 25 ಮಹಿಳೆಯರು ಸೇರಿದ್ದು, ಐವರು ಮಕ್ಕಳಿಗೆ ಇದ್ದಾರೆ. ನಗರದ ಕೆಬಿಎನ್ ದರ್ಗಾ ಪ್ರದೇಶದಲ್ಲಿ 13 ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ. ಒಬ್ಬರು ಜ್ವರ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೆ, 12 ಮಂದಿಗೆ ರ್‍ಯಾಂಡಮ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಕೆಬಿಎನ್ ಆಸ್ಪತ್ರೆಯಲ್ಲಿ 25 ವರ್ಷದ ಮಹಿಳಾ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ.
ಯಶೋಧ ಆಸ್ಪತ್ರೆಯಲ್ಲಿ 6 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಗಾಜಿಪುರದ ಸಿದ್ದೇಶ್ವರ ಕಾಲೋನಿಯಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಮೂವರು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದ ಒಬ್ಬ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ. ಸೇrಷನ್ ಬಜಾರ್ ಪ್ರದೇಶದಲ್ಲಿ ಮೂವರಿಗೆ ಕೋವಿಡ್ ಅಂಟಿದೆ. ಕೆಎಸ್‌ಪಿಆರ್ ಪೇದೆ ಹಾಗೂ ಆಳಂದದಲ್ಲಿ ಪೊಲೀಸ್ ಪೇದೆಗೆ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,816ಕ್ಕೆ ಏರಿಕೆಯಾಗಿದೆ. ಇದೇ ವೇಳೆ 22 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ 1,352 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದಂತೆ ಆಗಿದೆ. ಇನ್ನು, 435 ಕೊರೊನಾ ಪೀಡಿತರಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.