ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಮತ್ತಿಬ್ಬರನ್ನು ಬಲಿ ಪಡೆದಿದೆ. ಈ ಮೂಲಕ ಒಟ್ಟು ಮೃತ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ನಗರದ ಸ್ಟೇಷನ್ ಬಜಾರ್ ಪ್ರದೇಶದ 71 ವರ್ಷದ ವೃದ್ಧ (ಪಿ-26,671) ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಉಸಿರಾಟ, ಕಫ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ಜು.5ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ಅವರು ಕೊನೆಯುಸಿರೆಳಿದ್ದಾರೆ.
ಅದೇ ರೀತಿಯ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ನ 40 ವರ್ಷದ ಪುರುಷ (ಪಿ-26,681) ಸಾವನ್ನಪ್ಪಿದ್ದಾರೆ. ಉಸಿರಾಟ ಮತ್ತು ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದ ಇವರನ್ನು ಜು.3ರಂದು ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜು.5ರಂದು ಮೃತಪಟ್ಟಿದ್ದಾರೆ. ಇಬ್ಬರ ವೈದ್ಯಕೀಯ ವರದಿ ಮಂಗಳವಾರ ಬಂದಿದ್ದು, ಕೋವಿಡ್ ಸೋಂಕು ಹರಡಿದ್ದು ಖಚಿತವಾಗಿದೆ.
1,750 ಸೋಂಕಿತರ ಸಂಖ್ಯೆ: ಇಬ್ಬರು ಮೃತರು ಸೇರಿ 51 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಕ್ಕೆ 1,750ಕ್ಕೆ ಏರಿಕೆಯಾಗಿದೆ. ಕಲಬುರಗಿ ನಗರದಲ್ಲೇ 39 ಜನರಿಗೆ ಸೋಂಕು ಪತ್ತೆಯಾಗಿದೆ. ಅಫಜಲಪುರ, ಆಳಂದ, ಚಿತ್ತಾಪುರ, ಶಹಾಬಾದ್ ತಾಲೂಕಿನಲ್ಲಿ ತಲಾ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ವಿಜಯಪುರ ಜಿಲ್ಲೆಯ ಆಲಮೇಲದ ವೃದ್ಧನಿಗೂ ಕೋವಿಡ್ ತಗುಲಿದೆ.
51 ಜನರಲ್ಲಿ ಒಂದು ವರ್ಷ ಎಂಟು ತಿಂಗಳು ಮಗುವಿಗೂ ಕೋವಿಡ್ ವಕ್ಕರಿಸಿದೆ. ಅಫಜಲಪುರ ತಾಲೂಕಿನ ಹವನೂರು ತಾಂಡಾದ ಈ ಮಗು ಉಸಿರಾಟ ಮತ್ತು ಜ್ವರ ಸಮಸ್ಯೆಯಿಂದ ಬಳಲುತ್ತಿದೆ. ಸೋಂಕಿತರ ಪೈಕಿ 29 ಮಹಿಳೆಯರು ಸಹ ಸೇರಿದ್ದಾರೆ. ಉಸಿರಾಟ ಮತ್ತು ಜ್ವರ ಹಿನ್ನೆಲೆಯ 29 ಜನರು, ಸೋಂಕಿತರ ನೇರ ಸಂಪರ್ಕಕ್ಕೆ ಬಂದ 19 ಮಂದಿ, ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಇಬ್ಬರು, ಬೆಂಗಳೂರು ಮತ್ತು ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ 19 ಸೋಂಕಿತರು ಬಿಡುಗಡೆಗೊಂಡಿದ್ದು, ಇದರೊಂದಿಗೆ 1,329 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆ ಬಂದಂತೆ ಆಗಿದೆ. ಇನ್ನು, 392 ಕೊರೊನಾ ಪೀಡಿತರಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.