ಕಲಬುರಗಿ: ಉಸಿರಾಟ ಮತ್ತು ಜ್ವರದ ಸಮಸ್ಯೆಯುಳ್ಳವರಿಗೆ ಮಹಾಮಾರಿ ಕೋವಿಡ್ ಸೋಂಕು ಅಕ್ಷರಶಃ ಕಂಟಕವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮತ್ತಿಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳಲ್ಲಿ ಆರು ಜನರು ಕೋವಿಡ್ ನಿಂದ ಮೃತಪಟ್ಟಿದ್ದರು. ರವಿವಾರ ಇಬ್ಬರು ಬಲಿಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಉಸಿರಾಟದ ಸಮಸ್ಯೆಯೊಂದಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ನಗರದ ಅನ್ನಪೂರ್ಣ ಕ್ರಾಸ್ ಪ್ರದೇಶದ 69 ವರ್ಷದ ವೃದ್ಧ (ಪಿ-21318) ಜು.3ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.4ರಂದು ಮೃತಪಟ್ಟಿದ್ದಾರೆ. ಅದೇ ರೀತಿ ಶಹಾಬಾದ ಪಟ್ಟಣದ ಮಸ್ಜಿದ್ ಚೌಕ್ ಪ್ರದೇಶದ 66 ವರ್ಷದ ವೃದ್ಧ (ಪಿ-23,288) ಸಹ ಕೋವಿಡ್‌ಗೆ ಬಲಿಯಾಗಿದ್ದಾರೆ. ಇವರು ಸಹ ಉಸಿರಾಟ ತೊಂದರೆಯೊಂದಿಗೆ ತೀವ್ರ ಜ್ವರ, ಕೆಮ್ಮು ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಜು.3ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ವೃದ್ಧ ಮೃತಪಟ್ಟಿದ್ದಾರೆ. ಇಬ್ಬರ ವೈದ್ಯಕೀಯ ವರದಿ ರವಿವಾರ ಬಂದಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.
1,600 ಗಡಿ ದಾಟಿತು: ಇಬ್ಬರು ಮೃತರು ಸೇರಿ ರವಿವಾರ ಹೊಸದಾಗಿ 49 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,646ಕ್ಕೆ ಏರಿಕೆಯಾಗಿದೆ. 49 ಜನ ಸೋಂಕಿರಲ್ಲಿ 11 ಮಂದಿ ಸೋಂಕಿತರು ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಸೋಂಕಿತರ ಸಂಪರ್ಕದಿಂದ 12 ಜನರಿಗೆ ಸೋಂಕು ಹರಡಿದೆ. ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆಯ ಹತ್ತು ಜನರು, ಬೆಂಗಳೂರಿಂದ ಬಂದ ಇಬ್ಬರು, ಗುಜರಾತ್ ಮತ್ತು ಬೀದರ್ ಪ್ರವಾಸ ಹಿನ್ನೆಲೆಯ ತಲಾ ಒಬ್ಬರು, ಕಂಟೇನ್ಮೆಂಟ್ ಝೋನ್ ಸಂಪರ್ಕದ ನಾಲ್ವರು ಹಾಗೂ ರ್‍ಯಾಂಡಮ್ ಪರೀಕ್ಷೆಯಲ್ಲಿ ಹತ್ತು ಜನರಿಗೆ ಮಹಾಮಾರಿ ಸೋಂಕು ಪತ್ತೆಯಾಗಿದೆ.
ತಾಲೂಕಾವಾರು: ರವಿವಾರ ಏಳು ತಾಲೂಕುಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿ ನಗರ-11, ಚಿತ್ತಾಪುರ-5, ಶಹಾಬಾದ-10, ಅಫಜಲಪುರ-7, ಜೇವರ್ಗಿ 14, ಆಳಂದ ಮತ್ತು ಕಮಲಾಪುರದಲ್ಲಿ ಒಬ್ಬರಿಗೆ ಕೊರೊನಾ ಹರಡಿದೆ. ಕಲಬುರಗಿ ನಗರದ ತಾರ್‌ಫೈಲ್ ಬಡಾವಣೆಯ 35 ವರ್ಷದ ಯುವಕ, ಛೋಟಾ ರೋಜಾದ 46 ವರ್ಷದ ಮಹಿಳೆ, ರಿಂಗ್ ರಸ್ತೆಯ ಮಹಾರಾಜ್ ಹೋಟೆಲ್ ಸಮೀಪದ 56 ವರ್ಷದ ಪುರುಷ, ಮಕ್ತಂಪುರದ 29 ವರ್ಷದ ಪುರುಷ, ಸಂಗಮೇಶ್ವರ ನಗರದ 62 ವರ್ಷದ ವೃದ್ಧ, ತಾಜ್ ನಗರದ 20 ವರ್ಷದ ಯುವಕ, ಕೈಲಾಸ ನಗರದ 44 ವರ್ಷದ ಪುರುಷ, ಪ್ರಗತಿ ಕಾಲೋನಿಯ 59 ವರ್ಷದ ಪುರುಷ, ರೇವಣಸಿದ್ದೇಶ್ವರ ಕಾಲೋನಿಯ 30 ವರ್ಷದ ಪುರುಷ, ಕರುಣೇಶ್ವರ ನಗರದ 37 ವರ್ಷದ ಪುರುಷ ಹಾಗೂ ಪೊಲೀಸ್ ವಸತಿ ಗೃಹದ 59 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಅಫಜಲಪುರ ತಾಲೂಕಿನ ಗೌರ ಬಿ ಗ್ರಾಮದ 25 ವರ್ಷದ ಯುವಕ, 9 ವರ್ಷದ ಬಾಲಕ, ದೇವಲಗಾಣಗಪುರದ ಓರ್ವ ಮಹಿಳೆ ಸೇರಿ ನಾಲ್ವರು, ಆಳಂದ ತಾಲೂಕಿನ ಲೇಂಗಟಿ ಗ್ರಾಮದಲ್ಲಿ ಗುಜರಾತ್‌ನಿಂದ ಬಂದ 18 ವರ್ಷದ ಯುವಕನಿಗೆ ಕೊರೊನಾ ಪತ್ತೆಯಾಗಿದೆ.
ಇದೇ ವೇಳೆ 52 ಜನ ಸೋಂಕಿತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸಹ 1,241ಕ್ಕೆ ಏರಿಕೆಯಾಗಿದೆ. ಇನ್ನು, 378 ಜನ ಸೋಂಕಿತರು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.