ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಸೋಂಕು ಮತ್ತೆ ಮೂವರನ್ನು ಬಲಿ ಪಡೆದಿದೆ. ಜ್ವರ ಮತ್ತು ಉಸಿರಾಟದ ಬಳಲುತ್ತಿದ್ದ ಓರ್ವ ಮಹಿಳೆ ಮತ್ತು 70 ವರ್ಷ ಮೇಲ್ಪಟ್ಟ ಇಬ್ಬರು ವೃದ್ಧರು ಸೋಂಕಿನಿಂದ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಈ ಮೂಲಕ ಇದುವರೆಗೆ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಇಲ್ಲಿನ ಇಸ್ಲಾಮಾಬಾದ್ ಕಾಲೋನಿಯ 45 ವರ್ಷದ ಮಹಿಳೆ (ಪಿ-21,323) ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಜು.1ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.3ರಂದು ಕೊನೆಯುಸಿರೆಳೆದಿದ್ದಾರೆ. ಅದೇ ರೀತಿಯಾಗಿ ಇದೇ ಕಾಲೋನಿಯ 75 ವರ್ಷದ ವೃದ್ಧ (ಪಿ-21,343) ಉಸಿರಾಟದ ಸಮಸ್ಯೆ, ಎದೆನೋವಿನ ಕಾರಣ ಜು.1ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇವರು ಜು.2ರಂದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದರ್ಗಾ ರಸ್ತೆ ಪ್ರದೇಶದ 73 ವರ್ಷದ ವೃದ್ಧ (ಪಿ-21,344) ಸಹ ಎದೆನೋವು ಹಾಗೂ ಉಸಿರಾಟದ ಸಮಸ್ಯೆಯಿಂದ ಜು.1ರಂದೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರು ಸಹ ಜು.2ರಂದು ಚಿಕಿತ್ಸೆ ಫಲಸದೆ ಮೃತಪಟ್ಟಿದ್ದಾರೆ. ಈ ವೃದ್ಧರು ವೃತ್ತಿಯಲ್ಲಿ ಟೈಲರ್ ಆಗಿದ್ದು, ದರ್ಗಾ ರಸ್ತೆಯಲ್ಲಿ ಹೆಸರಾಂತ ಟೈಲರ್ ಅಂಗಡಿಯ ಮಾಲೀಕರಾಗಿದ್ದಾರೆ. ಶುಕ್ರವಾರ ಇವರು ಸಹ ಸೋಂಕಿನಿಂದ ಮೃತಪಟ್ಟಿದ್ದು ಖಚಿತವಾಗಿತ್ತು. ಈ ಮೂವರು ಸಹ ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.
37 ಹೊಸ ಪ್ರಕರಣ: ಮೂವರು ಮೃತರು ಸೇರಿ ಶನಿವಾರ ಹೊಸದಾಗಿ ಮತ್ತೆ 37 ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ. ಇದರಲ್ಲಿ ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 16 ಜನರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಇಂತಹ ಆರೋಗ್ಯ ಸಮಸ್ಯೆಯುಳ್ಳರಲ್ಲಿ ಆಘಾತ ಮೂಡಿಸುವಂತೆ ಮಾಡಿದೆ.
ಜಗತ್‌ನ ಲಕ್ಷ್ಮೀ ನಗರದ 31 ವರ್ಷದ ಮಹಿಳೆ, ಶಹಾಬಾದ್ ಪಟ್ಟಣದ 29 ವರ್ಷದ ಮಹಿಳೆ, ಎಂಎಸ್‌ಕೆ ಮಿಲ್ ಪ್ರದೇಶದ 35 ವರ್ಷದ ಪುರುಷ, ವಿವೇಕಾನಂದ ನಗರದ 35 ವರ್ಷದ ಪುರುಷ, ಅನ್ನಪೂರ್ಣ ಕ್ರಾಸ್‌ನ 69 ವರ್ಷದ ವೃದ್ಧ, ಇಸ್ಲಾಮಾಬಾದ್ ಕಾಲೋನಿಯ 50 ವರ್ಷದ ಪುರುಷ, ಗಣೇಶ ಮಂದಿರ ಸಮೀಪದ 28 ವರ್ಷದ ಯುವಕ, ಸತ್ರಾಸವಾಡಿಯ 53 ವರ್ಷದ ಪುರುಷ. ತಾಜ್ ಸುಲ್ತಾನ್‌ಪುರದ ಕೆಎಸ್‌ಆರ್‌ಪಿ ವಸತಿ ಗೃಹದ 30 ವರ್ಷದ ಪುರುಷ, ಉಮರ್ ಕಾಲೋನಿಯ 30 ವರ್ಷದ ಪುರುಷ, ಕಮರ್ ಕಾಲೋನಿಯ 34 ವರ್ಷದ ಪುರುಷ, ಬ್ಯಾಂಕ್ ಕಾಲೋನಿಯ 62 ವರ್ಷದ ವೃದ್ಧ, ಸರಫ್ ಬಜಾರ್‌ನ ಮಕ್ತಾಪುರಂದ 34 ವರ್ಷದ ಪುರುಷನಿಗೆ ಕೋವಿಡ್ ವಕ್ಕರಿಸಿದೆ. ಅದೇ ರೀತಿಯಾಗಿ ರ್‍ಯಾಂಡಮ್ ಪರೀಕ್ಷೆಯಲ್ಲೂ ಪಿಡಬ್ಲ್ಯುಡಿ ವಸತಿ ಗೃಹದ 38 ವರ್ಷದ ಪುರುಷ, ಆರ್. ಜಿ.ನಗರದ ಪೊಲೀಸ್ ಠಾಣೆಯ 36 ವರ್ಷದ ಪೇದೆ, ಚಿಂಚೋಳಿ ತಾಲೂಕಿನ ಐನಾಪುರದಲ್ಲಿ ಒಂಭತ್ತು ಜನರಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ.
ಇನ್ನು, ಸೋಂಕಿತರ ಸಂಪರ್ಕಕ್ಕೆ ಬಂದ ಆರು ಜನರಿಗೂ ಕೋವಿಡ್ ಅಂಟಿದೆ. ತೆಲಂಗಾಣದ ಪ್ರವಾಸ ಹಿನ್ನೆಲೆಯ ಓರ್ವ, ಸೌದಿ ಅರೇಬಿಯಾದಿಂದ ಬಂದಿರುವ ಒಬ್ಬ ಹಾಗೂ ಬೀದರ್ ಜಿಲ್ಲೆಯ ಒಬ್ಬರಿಗೂ ಕೋವಿಡ್ ಕಾಣಿಸಿಕೊಂಡಿದೆ. ಒಟ್ಟಾರೆ, 37 ಜನರ ಸೋಂಕಿತರಲ್ಲಿ ಒಂಭತ್ತು ಮಹಿಳೆಯರು, ಇಬ್ಬರು ಮಕ್ಕಳಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,597ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಶನಿವಾರ 46 ಸೊಂಕಿತರು ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 1,189 ಜನ ಮನೆಗೆ ತೆರಳಿದಂತೆ ಆಗಿದೆ.
ಮಹಾ’ ನಂಟು ಕಡಿತ
ಕಲಬುರಗಿ ಜಿಲ್ಲೆಯನ್ನೇ ಸಂಪೂರ್ಣವಾಗಿ ಆತಂಕಕ್ಕೆ ದೂಡಿದ್ದ ಮಹಾರಾಷ್ಟ್ರದ ಸೋಂಕಿನಿಂದ ದಿನದಿಂದ ದಿನಕ್ಕೆ ಕಡಿತವಾಗುತ್ತಿದೆ. ಶುಕ್ರವಾರ ಮಹಾರಾಷ್ಟ್ರದಿಂದ ಬಂದಿದ್ದ 12 ಜನರಿಗೆ ಸೋಂಕು ಪತ್ತೆಯಾಗಿತ್ತು. ಆದರೆ, ಶನಿವಾರ ಮಹಾರಾಷ್ಟ್ರ ನಂಟಿನ ಯಾರೊಬ್ಬರಿಗೂ ಸೋಂಕಿನ ವರದಿಯಾಗಿಲ್ಲ. ಇನ್ನು, ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಸಹ ದಿನೆದನೇ ಕಡಿಮೆ ಆಗುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ ಹಾಗೂ ಇತರಕಡೆ ನಿತ್ಯ ಓಡಾಡುವವರಿಗೆ ಪಾಸ್ ನೀಡಲಾಗಿದ್ದು, ಹೊಸದಾಗಿ ಬರುವವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತಿದೆ.