Advertisement

ದಾಲ್‌ಮಿಲ್‌ ಉದ್ಯಮಕ್ಕೆ ಕೊರೊನಾ ಹೊಡೆಕ್ಕೆ

06:23 PM Mar 22, 2020 | Team Udayavani |

ಕಲಬುರಗಿ: ಕಳೆದ ವರ್ಷ ಬರಗಾಲ, ಅದರ ಹಿಂದಿನ ವರ್ಷಗಳಲ್ಲಿ ಬೆಲೆ ಏರಿಳಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ದಾಲ್‌ಮಿಲ್‌ (ಬೇಳೆ ತಯಾರಿಕಾ ಕಾರ್ಖಾನೆ) ಉದ್ಯಮ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವ ಸಮಯದಲ್ಲೇ “ಕೊರೊನಾ’ ದಾಳಿ ಇಟ್ಟಿರುವುದು ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ.

Advertisement

ಕಳೆದ ವರ್ಷ ಒಟ್ಟಾರೆ ದಾಲ್‌ಮಿಲ್‌ ಗಳಲ್ಲಿ ಅರ್ಧದಷ್ಟು ಬಂದ್‌ ಆಗಿದ್ದವು. ಆದರೆ ಈ ವರ್ಷ ತೊಗರಿ ಇಳುವರಿ ಸರಿಯಾಗಿ ಬಂದಿರುವುದರಿಂದ ದಾಲ್‌ಮಿಲ್‌ಗ‌ಳು ಜನವರಿ-ಫೆಬ್ರುವರಿ ತಿಂಗಳಲ್ಲಿ ಎಲ್ಲವನ್ನು ಸರಿದೂಗಿಸಿ ಪ್ರಾರಂಭಿಸಲಾಗಿತ್ತು. ಇನ್ನೇನು ಬೇಳೆ ತಯಾರಿಕಾ ಕಾರ್ಯ ಆರಂಭವಾಗುತ್ತದೆ ಎನ್ನುವಷ್ಟರಲ್ಲೇ ಕೊರೊನಾ ಭೀತಿ ಇಡೀ ಉದ್ಯಮ ನಲುಗುವಂತೆ ಮಾಡಿದೆ.

ಮುಖ್ಯವಾಗಿ ಕಾರ್ಮಿಕರ್ಯಾರು ಕೆಲಸಕ್ಕೆ ಬರುತ್ತಿಲ್ಲ. ಜತೆಗೆ ಕಳೆದ ವಾರದಿಂದ ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್‌ ಆಗಿದೆ. ಇದರಿಂದ ಕಾರ್ಖಾನೆಗೆ ಬೇಕಾಗುವ ತೊಗರಿ ಸಿಗದಂತಾಗಿದೆ. ಜತೆಗೆ ಮಾರ್ಚ್‌ ತಿಂಗಳು ಆಗಿರುವುದರಿಂದ ಬ್ಯಾಂಕ್‌ನವರು ಸಾಲದ ಕಂತು ಹಾಗೂ ಬಡ್ಡಿ ಕಟ್ಟುವಂತೆ ದುಂಬಾಲು ಬಿದ್ದಿದ್ದಾರೆ.

ಎರಡು ತಿಂಗಳು ತಯಾರು ಮಾಡಲಾಗಿದ್ದ ತೊಗರಿ ಬೇಳೆ ಬೇರೆ ಕಡೆ ಸರಬರಾಜು ಮಾಡಬೇಕೆಂದರೆ ಲಾರಿ ಮಾಲೀಕರು-ಚಾಲಕರು ಮುಂದೆ ಬರುತ್ತಿಲ್ಲ. ಒಟ್ಟಾರೆ ತೊಗರಿ ಬೇಳೆ ತಯಾರಿಕಾ ದಾಲ್‌ಮಿಲ್‌ಗ‌ಳಿಗೆ ಸರಿಯಾದ ಸಮಯ ಇಲ್ಲ ಎನ್ನುವಂತಾಗಿದೆ. ಚಿನ್ನದ ಮೊಟ್ಟೆ ಇಡುವ ಕಾರ್ಯವೆಂದೇ ಖ್ಯಾತಿ ಪಡೆದಿದ್ದ ರಾಜ್ಯವಲ್ಲದೇ ನೆರೆಯ ತಮಿಳನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಿಗೆ ತೊಗರಿ ಬೇಳೆ ಪೂರೈಕೆ ಮಾಡುತ್ತಿದ್ದ ಕಲಬುರಗಿಯ ತೊಗರಿ ಬೇಳೆ ಉದ್ಯಮ ಪುನಶ್ಚೇತನಗೊಳ್ಳುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಆದರೆ ವರದಿ ಮೂಲೆಗುಂಪಾಗಿದೆ. ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ದಾಲ್‌ಮಿಲ್‌ ಉದ್ಯಮ ಪುನಶ್ಚೇತನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಲಾದ ಪ್ರಶ್ನೆಗೆ ದಾಲ್‌ಮಿಲ್‌ ಆದ್ಯತಾ ವಲಯ ಎಂಬುದಾಗಿ ಪರಿಗಣಿಸಲು ಹಾಗೂ ವಿದ್ಯುತ್‌ಗೆ ರಿಯಾಯ್ತಿ ನೀಡುವುದು, ಎಪಿಎಂಸಿ ಸೆಸ್‌ ವಿನಾಯಿತಿ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಎಷ್ಟು ವರ್ಷಗಳಿಂದ ಪರಿಶೀಲನೆ ನಡೆಸಲಾಗುವುದು ಎಂದು ಉದ್ಯಮಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ ದಾಲ್‌ಮಿಲ್‌ಗ‌ಳು ಪ್ರಮುಖ ಉದ್ಯಮವಾಗಿವೆ. ಈ ಭಾಗದ ಅಭಿವೃದ್ಧಿಗೆ ಪೂರಕವಾಗುವಲ್ಲಿ ತೊಗರಿ ಬೇಳೆ ಉದ್ಯಮ ಪುನಶ್ಚೇತನಗೊಳ್ಳುವುದು ಅವಶ್ಯಕವಾಗಿದೆ.
ಡಾ| ಮಲ್ಲಿಕಾರ್ಜುನ ಹೂಗಾರ,
ಅತಿಥಿ ಉಪನ್ಯಾಸಕ

Advertisement

ಕಳೆದ ಎರಡು ವರ್ಷಗಳಿಂದ ಪಾತಾಳಕ್ಕೆ ಇಳಿದಿದ್ದ ತೊಗರಿ ಬೇಳೆ ಉದ್ಯಮ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲೇ ಕೊರೊನಾ ಭೀತಿ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತೊಗರಿ ಬೇಳೆ ಉದ್ಯಮ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು.
ಭೀಮಾಶಂಕರ ಪಾಟೀಲ,
ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಉದ್ಯಮ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next