Advertisement

ಹೈಕ ಶಾಲೆಗಳ ಬಲವರ್ಧನೆಗೆ ಕ್ರಮ: ಸುಬೋಧ ಯಾದವ

05:21 PM Jun 30, 2019 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಯ ಶಾಲೆಗಳಲ್ಲಿರುವ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಸೇರಿದಂತೆ ಶಾಲೆಗಳ ಬಲವರ್ಧನೆಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಜು. 3ರ ಒಳಗೆ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ.27 ರಂದು ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭಾಗದಲ್ಲಿನ ಶಾಲೆಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಆರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಜೊತೆ ಚರ್ಚಿಸಿ ಅವರು ಮಾತನಾಡಿದರು.

ಜುಲೈ 3ರ ಒಳಗೆ ಎಲ್ಲ ಡಿಡಿಪಿಐಗಳು ವರದಿ ನೀಡಬೇಕು. ಜು. 4 ಅಥವಾ 5 ರಂದು ಮತ್ತೂಮ್ಮೆ ಪರಾಮರ್ಶಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶಾಲೆ ಕಟ್ಟಡ, ಶೌಚಾಲಯ, ಕುಡಿಯುವ ನೀರು, ದುರಸ್ತಿ, ವಿದ್ಯುತ್‌, ಕಾಂಪೌಂಡ್‌ ಮುಂತಾದವುಗಳ ಬಗ್ಗೆ ಮಾಹಿತಿ ನೀಡಬೇಕು. ಜಮೀನಿನ ವಿವಾದ ಇಲ್ಲದ ಕಡೆ ಮಾತ್ರ ಕಾಂಪೌಂಡ್‌ ನಿರ್ಮಿಸುವ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

ಅನುದಾನದ ಮಾಹಿತಿ ಇಲ್ಲ: ಶಾಲೆಗಳ ನಿರ್ವಹಣೆಗೆ ಸಾಕಷ್ಟು ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಆದರೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ನೀಡುವ ಅನುದಾನದ ಬಗ್ಗೆ ಮುಖ್ಯಶಿಕ್ಷಕರುಗಳಿಗೆ ಸರಿಯಾದ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ 43,616 ಹುದ್ದೆಗಳು ಮಂಜೂರಾಗಿ 34,768 ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, 8848 ಹುದ್ದೆಗಳು ಖಾಲಿ ಉಳಿದಿವೆ. ಅದೇ ರೀತಿ ಪ್ರೌಢಶಾಲೆ ಶಿಕ್ಷಕ ವೃಂದದಲ್ಲಿ 12,049 ಹುದ್ದೆಗಳು ಮಂಜೂರಾಗಿ 9833 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ 2216 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.

ಹೊಸ ಶಾಲೆಗಳನ್ನು ಸ್ಥಾಪಿಸುವುದಕ್ಕಿಂತ ಇರುವ ಶಾಲೆಗಳಿಗೆ ಉತ್ತಮ ಸೌಲಭ್ಯ ನೀಡುವುದರ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡುವುದರ ಕಡೆಗೆ ಹೆಚ್ಚಿನ ಗಮನ ನೀಡಿದಾಗ ಮಾತ್ರ ಸುತ್ತಮುತ್ತಲಿನ ಮಕ್ಕಳು ಅಲ್ಲಿನ ಶಾಲೆಗೆ ಪ್ರವೇಶ ಪಡೆಯಲು ಮುಂದಾಗುತ್ತಾರೆ. ಆ ಮೂಲಕ ಶಾಲೆಗಳ ಬಲವರ್ಧನೆಗೆ ಶ್ರಮಿಸಿ ಎಂದು ಶಿಕ್ಷಣ ಇಲಾಖೆ ಉಪರ್ದೇಶಕರಿಗೆ ತಿಳಿಸಿದರು. ಗಣಿತ ಮತ್ತು ಇಂಗ್ಲಿಷ್‌ ಕೋಚಿಂಗ್‌ ಕ್ಲಾಸ್‌: ಯಾದಗಿರಿಯಲ್ಲಿ ಈ ಹಿಂದೆ 535 ಹುದ್ದೆಗಳಿಗೆ ನಾವು ಅರ್ಜಿ ಕರೆದಿದ್ದು, ಅದರಲ್ಲಿ 350 ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ. ಬಿ.ಎಡ್‌ ಮತ್ತು ಡಿ.ಎಡ್‌ ಮುಗಿಸಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ಗಣಿತ ಮ್ತತು ಇಂಗ್ಲಿಷ್‌ ವಿಷಯದಲ್ಲಿ ಮೂರು ತಿಂಗಳು ಕೊಚಿಂಗ್‌ ಕ್ಲಾಸ್‌ ಪ್ರಾರಂಭ ಮಾಡುವುದಕ್ಕೆ ಹೈ.ಕ ಮಂಡಳಿ ಅನುದಾನ ನೀಡಿದಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿಗೆ ಸಹಾಯವಾಗಲಿದೆ ಎಂದು ಯಾದಗಿರಿ ಡಿಡಿಪಿಐ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಆಯುಕ್ತರು ಗಣಿತ ಮತ್ತು ಇಂಗ್ಲಿಷ ವಿಷಯದ ಅಭ್ಯರ್ಥಿಗಳು ಲಭ್ಯವಾದಲ್ಲಿ ಖಂಡಿತ ತರಬೇತಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಉಪಕಾರ್ಯದರ್ಶಿ ಡಾ| ಬಿ. ಸುಶೀಲಾ, ಜಂಟಿ ಕಾರ್ಯದರ್ಶಿ ಬಸವರಾಜ, ಮಂಡಳಿ ಶಿಕ್ಷಣ ಸಲಹೆಗಾರ ಎನ್‌.ಬಿ. ಪಾಟೀಲ ಹಾಗೂ ವಿಭಾಗದ ಆರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next