Advertisement

ಪಾಲಿಕೆ ಕಾಮಗಾರಿ ಚುರುಕುಗೊಳಿಸಿ: ಶರತ್‌

11:08 AM Nov 07, 2019 | |

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ಮೂಲ ಅನುದಾನ, ಎಸ್‌ಎಫ್‌ಸಿ ಅನುದಾನ, 13 ಮತ್ತು 14ನೇ ಹಣಕಾಸು ಆಯೋಗದ ಅನುದಾನದಡಿ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿದ್ದು, ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಪಾಲಿಕೆ ಅಧಿಕಾರಿಗಳಿಗೆ
ಸೂಚಿಸಿದರು.

Advertisement

ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಿಂದಿನ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಹಾಗೆಯೇ ಉಳಿದುಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಬಾಕಿ ಕಾಮಗಾರಿಗಳನ್ನು ಮುಗಿಸಬೇಕು ಎಂದರು.

2019-20ನೇ ಸಾಲಿನ ಎಲ್ಲ ಕಾಮಗಾರಿಗಳನ್ನು ಮಾರ್ಚ್‌-2020ರ ಅಂತ್ಯದ ವರೆಗೆ ಪೂರ್ಣಗೊಳಿಸುವಂತೆ ಪಾಲಿಕೆ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ಕೊಟ್ಟರು. ಪಾಲಿಕೆಯ 2019-20ನೇ ಸಾಲಿನ ಎಸ್‌ ಎಫ್‌ಸಿ ಅನ್‌ಟೈಡ್‌ ಅನುದಾನದಲ್ಲಿ ವೈಯಕ್ತಿಕ ಲಾಭ ಪಡೆಯುವ ಕಾಮಗಾರಿಗಳಿಗೆ ಇದುವರೆಗೆ ಟೆಂಡರ್‌ ಕರೆಯದಿರುವುದಕ್ಕೆ ಅಕ್ಷೇಪಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಟೆಂಡರ್‌ ಕರೆದು ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆಯಿರಿ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿನ ಕಾಮಗಾರಿಗೆ 2ನೇ ಕರೆ, 3ನೇ ಕರೆ ಕರೆಯುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಟೆಂಡರ್‌ ಪ್ರಕ್ರಿಯೆಗಳು ಇ-ಪ್ರೋಕ್ಯೂರಮೆಂಟ್‌ ಮೂಲಕ ನಡೆಯುತ್ತಿರುವುದರಿಂದ ಟೆಂಡರ್‌ ಕರೆಯುವ ಪ್ರಾಧಿಕಾರ ಪ್ರತಿ ಕಾಮಗಾರಿಗೆ ನಿಗದಿಪಡಿಸಿದ ಟೆಂಡರ್‌ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಕೇವಲ ಓರ್ವ ಗುತ್ತಿಗೆದಾರರು ಬಿಡ್‌ ಸಲ್ಲಿಸಿದಲ್ಲಿ, ಅದನ್ನು ನಿಯಮಾನುಸಾರ ಪುರಸ್ಕರಿಸಿ. ಕೇವಲ ಓರ್ವ ಬಿಡ್ಡುದಾರರು ಮಾತ್ರ ಮುಂದೆ ಬಂದಿದ್ದಾರೆ ಎಂದು ಕಾರಣವೊಡ್ಡಿ ಮತ್ತೆ ಟೆಂಡರ್‌ ಪುನಃ ಕರೆದು ಕಾಮಗಾರಿ ನಿಧಾನಗತಿಗೆ ಮುಂದುವರಿಸಬೇಡಿ ಎಂದರು.

ಪೋಸ್ಟರ್‌ಗಳಿಗೆ ಕಡಿವಾಣ ಹಾಕಿ: ನಗರದ ಜಗತ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಅನುಮತಿ ಪಡೆಯದೇ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ಶಿವಣಗೌಡ ಪಾಟೀಲ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ನಗರೋತ್ಥಾನ 2ನೇ ಹಂತದಲ್ಲಿ ಹಂಚಿಕೆಯಾದ 100 ಕೋಟಿ ರೂ. ಮೊತ್ತದಡಿ 138 ಕಾಮಗಾರಿಗಳನ್ನು ತೆಗೆದುಕೊಂಡು, 136 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಿಡುಗಡೆಯಾದ 92.41 ಕೋಟಿ ರೂ. ಅನುದಾನವನ್ನು ಸಂಪೂರ್ಣ ಖರ್ಚು ಮಾಡಲಾಗಿದೆ ಎಂದರು.

3ನೇ ಹಂತದ ನಗರೋತ್ಥಾನ ಯೋಜನೆಯಡಿ 100 ಕೋಟಿ ರೂ. ಅನುದಾನದಲ್ಲಿ 34 ಕಾಮಗಾರಿಗಳನ್ನು ತೆಗೆದುಕೊಂಡು 27 ಮುಗಿಸಲಾಗಿದೆ. ನಗರ ಟ್ರಾಫಿಕ್‌ ಸಂಚಾರಕ್ಕೆ ಸಂಬಂಧಿ ಸಿದಂತೆ ಮೂರು ಕಾಮಗಾರಿಗಳು ಪೊಲೀಸ್‌ ಇಲಾಖೆಗೆ ವಹಿಸಿದ್ದು, ಇದುವರೆಗೆ ಬಿಡುಗಡೆಯಾದ 46.18 ಕೋಟಿ ರೂ. ಖರ್ಚು ಮಾಡಿ ಶೇ.100ರಷ್ಟು ಪ್ರಗತಿ ಸಾಧಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಲಬುರಗಿ ನಗರಕ್ಕೆ 24×7 ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ. ಅನುದಾನ ಕಾಯ್ದಿರಿಸಿಕೊಳ್ಳಲಾಗಿದೆ. ಅಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ಮೂಲ ಅನುದಾನ, ಎಸ್‌ಎಫ್‌ಸಿ ವಿಶೇಷ ಅನುದಾನ 40 ಕೋಟಿ ರೂ., ವಿಶೇಷ ಅನುದಾನ 50 ಕೋಟಿ ರೂ., ಎಸ್‌ಎಫ್‌ಸಿ ಅನ್‌ಟೈಡ್‌ ಅನುದಾನ, ಎಸ್‌ಎಫ್‌ಸಿ, ಎಸ್‌ಸಿಸಿಪಿ, ಎಸ್‌ಎಫ್‌ಸಿ ವಿಶೇಷ ಅನುದಾನ, 13 ಮತ್ತು 14ನೇ ಹಣಕಾಸು ಆಯೋಗದ ಅನುದಾನದಡಿ ಕೈಗೊಂಡ ಕಾಮಗಾರಿಗಳ ಅಂಕಿ-ಸಂಖ್ಯೆ ಸಭೆ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾಧಿಕಾರಿಗಳು ಮುಂದಿನ ಸಭೆಗೆ ಪ್ರತಿ ಕಾಮಗಾರಿಯ ಸಮಗ್ರ ಚಿತ್ರಣ ಸಲ್ಲಿಸುವಂತೆ ತಿಳಿಸಿದರು. ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಡಿಯುಡಿಸಿ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ ಹಾಗೂ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರು, ಕಾರ್ಯಪಾಲಕ ಅಭಿಯಂತರು, ಕಿರಿಯ ಎಂಜಿನಿಯರ್‌ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next