ಕಲಬುರಗಿ: ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ಇತಿಹಾಸದ ನಡುವೆಯೇ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ್ ಗೆದ್ದರೂ ಅಥವಾ ಸೋತರೂ ಮಗದೊಂದು ಇತಿಹಾಸ ಬರೆಯಲಿದ್ದಾರೆ. ಗೆದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಡಾ| ಅಜಯಸಿಂಗ್ ಅವರನ್ನು ಮೀರಿಸಿದಂತಾಗುತ್ತದೆ. ಒಂದು ವೇಳೆ ಸೋತರೆ ಅವರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.
ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರರೂ ಆದ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್ ಪುತ್ರ ಡಾ|ಅಜಯಸಿಂಗ್ ಪ್ರಥಮ ಸಲ ಸ್ಪರ್ಧಿಸಿ ಮೊದಲ ಯತ್ನದ ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು. ಈಗ ಚಿಂಚೋಳಿಯಲ್ಲಿ ಮಾಜಿ ಶಾಸಕ ಡಾ| ಉಮೇಶ ಜಾಧವ್ ಪುತ್ರ ಡಾ| ಅವಿನಾಶ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುವರೋ? ಇಲ್ಲವೇ ಸೋತು ಸೋಲಿನ ಸಾಲಿನೊಂದಿಗೆ ಸೇರುವರೋ? ಎಂಬುದು ಕ್ಷೇತ್ರದಾದ್ಯಂತ ಚರ್ಚೆಯಾಗುತ್ತಿದೆ.
ಇತಿಹಾಸ: 2008ರ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಮುಂದೆ 2009ರಲ್ಲಿ ಲೋಕಸಭಾ ಚುನಾವಣೆಗೆ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಿ ಚುನಾಯಿತರಾದರು. ಆಗ ಅವರ ರಾಜೀನಾಮೆಯಿಂದ ತೆರವಾದ ಚಿತ್ತಾಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಬಿಜೆಪಿಯ ವಾಲ್ಮೀಕಿ ನಾಯಕ ಎದುರು ಸೋಲು ಅನುಭವಿಸಿದರು.
ಅದೇ ರೀತಿ 2010ರಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಅಜಯಸಿಂಗ್ ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ ಎದುರು ಪರಾಭವಗೊಂಡರು. ಮುಂದೆ 2013ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಹಾಗೂ ಡಾ| ಅಜಯಸಿಂಗ್ ಏಕಕಾಲಕ್ಕೆ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು.
ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಡಾ| ಉಮೇಶ ಜಾಧವ್ ಚಿಂಚೋಳಿ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಉಪಚುನಾವಣೆಯಲ್ಲಿ ಪುತ್ರ ಡಾ| ಅವಿನಾಶ ಜಾಧವ್‌ಗೆ ಸ್ಪರ್ಧಿಸಲು ಅವಕಾಶ ಕೊಟ್ಟು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಗೆಲುವು ಸಾಧಿಸಿದರೆ ಮಕ್ಕಳ ರಾಜಕೀಯದಲ್ಲಿ ಖರ್ಗೆ-ಧರ್ಮಸಿಂಗ್ ಅವರಿಗಿಂತ ಡಾ| ಜಾಧವ್ ಮೇಲುಗೈ ಸಾಧಿಸಿದಂತಾಗುತ್ತದೆ. ಮಹಾನ್ ನಾಯಕರ ಪುತ್ರರೇ ಪ್ರಥಮ ಯತ್ನದ ಉಪಚುನಾವಣೆಯಲ್ಲಿಯೇ ಸೋತಿರುವಾಗ ಡಾ| ಉಮೇಶ ಜಾಧವ್ ಪುತ್ರ ಗೆದ್ದರಂತು ದಾಖಲೆಯೇ ಸರಿ. ಹೀಗಾಗಿ ಚಿಂಚೋಳಿ ಉಪಚುನಾವಣೆ ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ.
ಹಣಮಂತರಾವ ಭೈರಾಮಡಗಿ