Advertisement

ಕಾನೂನು ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗ: ಜಗದೀಶ

04:44 PM May 31, 2019 | Naveen |

ಕಲಬುರಗಿ: ಕಾನೂನು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಮಾತ್ರವಲ್ಲದೇ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾ ವಕಾಶಗಳಿವೆ ಎಂದು ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಗದೀಶ ವಿ.ಎನ್‌. ತಿಳಿಸಿದರು.

Advertisement

ನಗರದ ಸಿದ್ಧಾರ್ಥ ಕಾನೂನು ಮಹಾ ವಿದ್ಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾನೂನು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಪದವಿಧರರಿಗೆ ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೊಗವಕಾಶಗಳಿವೆ. ಉದ್ಯೋಗಕ್ಕೆ ಬೇಕಾದ ಸಾಮರ್ಥ್ಯ ಮತ್ತು ದಕ್ಷತೆ ಕೊರತೆ ಕಾರಣದಿಂದಾಗಿ ಅವುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಖಾಸಗಿ ಕಂಪನಿಗಳು, ಬ್ಯಾಂಕ್‌ಗಳು, ಮಾಧ್ಯಮ ಕ್ಷೇತ್ರದಲ್ಲಿ ಕಾನೂನು ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದು ಎಂದು ಹೇಳಿದರು.

ಉತ್ತಮ ನ್ಯಾಯವಾದಿಯಾಗಲು ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ. ನ್ಯಾಯವಾದಿಗಳು ಸಂವಹನ ಕೌಶಲ್ಯ ಕರಗತ ಮಾಡಿಕೊಳ್ಳಬೇಕು. ಕನಿಷ್ಠ ಐದು ವರ್ಷವಾದರೂ ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು. ಕಠಿಣ ಪರಿಶ್ರಮದೊಂದಿಗೆ ಜರ್ನಲ್ಸ್ಗಳನ್ನು ಓದಬೇಕೆಂದು ಸಲಹೆ ನೀಡಿದರು.

ಹಿರಿಯ ನ್ಯಾಯವಾದಿಗಳಿಂದ ಉಕ್ತ ಲೇಖನ (ಡಿಕ್ಟೇಶನ್‌) ಪಡೆಯಬೇಕು. ಇದರಿಂದ ಡ್ರಾಫ್ಟಿಂಗ್‌ ಮಾಡಲು ಅನುಕೂಲವಾಗುತ್ತದೆ. ನ್ಯಾಯಾಲಯದಲ್ಲಿ ನಡೆಯುವ ವಾದ-ಪ್ರತಿವಾದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆಗ ಮಾತ್ರವೇ ಒಬ್ಬ ಸಮರ್ಥ ಹಾಗೂ ಯಶಸ್ವಿ ನ್ಯಾಯವಾದಿಯಾಗಲು ಸಾಧ್ಯವಾಗುತ್ತದೆ ಎಂದರು.

Advertisement

ಕಾರ್ಯಾಗಾರದ ಸಂಚಾಲಕ ಸುನೀಲ ಬಗಾಡೆ ಮಾತನಾಡಿ, ನ್ಯಾಯವಾದಿಗಳು ಕಾಲಕ್ಕೆ ತಕ್ಕಂತೆ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಇಲ್ಲವಾದಲ್ಲಿ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟವಾಗುತ್ತದೆ ಎಂದರು.

ಯುವ ನ್ಯಾಯವಾದಿಗಳು ಡ್ರಾಫ್ಟಿಂಗ್‌ ಮಾಡುವಾಗ ಪದ ಬಳಕೆ ಪ್ರಯೋಗ ಮತ್ತು ಪದ ಬಳಕೆ ರಚನೆ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಈಗ ಕಾನೂನು ಅಧ್ಯಯನ ಬಹಳ ಬದಲಾವಣೆಯಾಗಿದೆ. ವಿಜ್ಞಾನ, ತಂತ್ರಜ್ಞಾನ, ಸಮಾಜ ವಿಜ್ಞಾನ ಹಾಗೂ ಸೈಬರ್‌ ಅಪರಾಧ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ನ್ಯಾಯವಾದಿಗಳು ಜ್ಞಾನ ಹೊಂದಿರಬೇಕು. ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು ಎಂದು ಹೇಳಿದರು.

ಸಿದ್ಧಾರ್ಥ ಕಾನೂನು ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ| ಎಸ್‌. ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಪೀಪಲ್ಸ್ ಎಜ್ಯುಕೇಷನ್‌ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ| ಮಾರುತಿರಾವ ಮಾಲೆ, ಭಾರತೀಯ ಸ್ಟೇಟ್ ಬ್ಯಾಂಕ್‌ ವ್ಯವಸ್ಥಾಪಕ (ಕಾನೂನು) ಪ್ರಭಾಕರ ಬಿ., ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಪಿ.ಉಪೇಂದ್ರ ಆಚಾರ್‌, ಅಪರ್ಣಾ ಶಿಂಧೆ ಹಾಗೂ ವಿವಿಧ ಕಾನೂನು ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next