Advertisement

ಸಚಿವ ಸಂಪುಟದಲ್ಲಿ ಹೈಕಕ್ಕೆ ಚೆಂಬು

10:13 AM Aug 21, 2019 | Naveen |

ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹೈದ್ರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಒಂದು ಸಚಿವ ಸ್ಥಾನ ನೀಡಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಚೆಂಬಿನ ಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಮಿತಿ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹಿಂದುಳಿದ ಪ್ರದೇಶವಾದ ಹೈ.ಕ ಭಾಗಕ್ಕೆ ಎಲ್ಲ ಸರ್ಕಾರ ತಾರತಮ್ಯ ಧೋರಣೆ ತೋರುತ್ತಿವೆ ಎಂದು ಕಿಡಿಕಾರಿದರು.

ಹೈ.ಕ ಪ್ರದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿದ್ದು, ಎಲ್ಲ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ. ಆದರೆ, ಅಧಿಕಾರಕ್ಕೆ ಬರುವ ಸರ್ಕಾರಗಳು ತಾರತಮ್ಯ ಧೋರಣೆ ಮಾಡುತ್ತಿವೆ. ಬಿಜೆಪಿ ಸರ್ಕಾರ ಕೂಡ ಅದನ್ನೇ ಮುಂದುವರಿಸಿದೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಹೈ.ಕ ಭಾಗದ ಆರು ಜಿಲ್ಲೆಗಳಿಗೆ ಒಂದೇ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಕೇಂದ್ರ ಸ್ಥಾನವಾದ ಕಲಬುರಗಿಗೆ ಸಚಿವ ಸ್ಥಾನ ನೀಡದೆ ಸರ್ಕಾರ ಅವಮಾನ ಮಾಡಿದೆ. ಇದನ್ನು ಖಂಡಿಸಿ ಹೈ.ಕ ಭಾಗದ ಶಾಸಕರು, ಸಂಸದರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ನೀಡಿ ಸಾಕಾಗಿದೆ. ಇನ್ನೇನಿದ್ದರು ಬೀದರ್‌ಜಿಲ್ಲೆಯ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುವವರೆಗೆ ವಿರಮಿಸುವುದಿಲ್ಲ ಎಂದು ಎಂ.ಎಸ್‌. ಪಾಟೀಲ ನರಿಬೋಳ ಎಚ್ಚರಿಸಿದರು.

ಮುಖಂಡರಾದ ವಿನೋದ ಜನೆವರಿ, ಬಿ.ಎಸ್‌.ಮಾಲಿಪಾಟೀಲ, ಅನಂತ ಗುಡಿ, ರಾಘವೇಂದ್ರರಾವ್‌, ರಾಜಶೇಖರ ಬಂಡೆ, ಲಕ್ಷ್ಮಿಕಾಂತ ಸ್ವಾದಿ, ಸಂಭಾಜಿ, ಮಹೇಶ ಕೆಂಭಾವಿ, ಶಿವು ಅವರಳ್ಳಿ, ಅಖೀಲೇಶ ವಡೆಯರ್‌ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Advertisement

ರಾಜಕೀಯ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು
ಕಲಬುರಗಿ:
ಶರಣರ ಭೂಮಿ, ಸಂಸ್ಕೃತಿಯ ತವರೂರು ಕಲ್ಯಾಣ ಕರ್ನಾಟಕವನ್ನು ರಾಜಕೀಯ ಧ್ವನಿಯ ಕಾರಣಗಳಿಗಾಗಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟ ಮಾಡುವುದು ಸಲ್ಲುವಂತದ್ದಲ್ಲ ಎಂದು ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ತಿಳಿಸಿದ್ದಾರೆ. ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲವೆಂದು ಹಾಗೂ ಇನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟಗಾರರನ್ನು ಮುಂದೆ ಬಿಡುತ್ತಿರುವುದು ಖಂಡನೀಯವಾಗಿದೆ. ಕೆಲಸ ಮಾಡಲು ಮಂತ್ರಿ ಪದವಿಯೇ ಬೇಕೆಂದಿಲ್ಲ. ರಾಜ್ಯ ವಿಭಜಿಸುವಂತಹ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ಬೇಡ ಎಂದು ಕೋರಿದ್ದಾರೆ.

ಆರು ಸಚಿವರಿರುವ ಜಿಲ್ಲೆಗೆ ಒಂದೂ ಸಚಿವಗಿರಿ ಬೇಡವೇ?
ಕಲಬುರಗಿ: ಮಂಗಳವಾರ ರಚನೆಯಾದ ರಾಜ್ಯ ಸರ್ಕಾರದ ಸಂಪುಟದಲ್ಲಿ ಜಿಲ್ಲೆಗೆ ಒಂದೂ ಸ್ಥಾನವೂ ನೀಡದೇ ಇರುವುದು ಹೈಕ ಭಾಗಕ್ಕೆ ಹಾಗೂ ಮತದಾರರ ಪ್ರಭುಗಳಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಆರು ಜನ ಸಚಿವರಿದ್ದರು. ಯಾವುದೇ ಸರ್ಕಾರವಿದ್ದಾಗಲೂ ಇಬ್ಬರು, ಮೂವರು ಸಚಿವರಿದ್ದರು. ಆದರೆ ಈಗ ಒಬ್ಬರಿಗೂ ನೀಡದಿರುವುದು ಯಾವ ನ್ಯಾಯ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಪ್ರಶ್ನಿಸಿದ್ದಾರೆ. ಈ ಹಿಂದೆ 2008ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ಕಲಬುರಗಿ ಜಿಲ್ಲೆಗೆ ಹೊರ ಭಾಗದವರೇ ಜಿಲ್ಲಾ ಉಸ್ತುವಾರಿಗಳಾಗಿದ್ದರು. ಈಗಲೂ ಹೊರಗಿನವರೇ ಉಸ್ತುವಾರಿ ಮಂತ್ರಿಗಳಾಗುವಂತಾಗಿದೆ. ಒಟ್ಟಾರೆ ಜಿಲ್ಲೆಗೆ ಹೊರಗಿನವರ ಆಳ್ವಿಕೆಯನ್ನು ಹೇರುವ ಚಾಳಿಯನ್ನು ಬಿಜೆಪಿ ಮುಂದುವರೆಸಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next