ಕಲಬುರಗಿ: ‘ನಮ್ಮ ಶಾಲೆಗೆ ‘ಸಿಎಂ ಸರ್’ ಬರುತ್ತಾರೆಂದು ಸಂತೋಷದಲ್ಲಿದ್ದೆವು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಈಗ ‘ಸಿಎಂ ಸರ್’ ಬಾರದಿರುವುದು ದುಃಖವಾಗಿದೆ. ಆದರೆ, ಮಳೆ ಬಂದಿದ್ದರಿಂದ ಖುಷಿಯಾಗಿದೆ. ಹೀಗಾಗಿ ನಾವು ಒಂದನ್ನು ಕಳೆದುಕೊಂಡರೆ, ಮತ್ತೂಂದು ಪಡೆದುಕೊಂಡಂತಾಗಿದೆ..’
ಇವು ಕಲಬುರಗಿ ತಾಲೂಕಿನ ಕಟ್ಟಕಡೆಯ ಹೇರೂರ (ಬಿ) ಗ್ರಾಮದ ಶಾಲೆಯ ವಿದ್ಯಾರ್ಥಿಗಳ ಮಾತುಗಳು. ಮಳೆಯಿಂದಾಗಿ ಶನಿವಾರ ನಿಗದಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ರದ್ದಾಗಿದ್ದು, ಮಕ್ಕಳಲ್ಲಿ ನಿರಾಶೆ ತರಿಸಿದೆ. ಆದರೆ, ಮಳೆ ಮಕ್ಕಳನ್ನು ಸಂತೋಷಗೊಳಿಸಿದೆ. ಅಲ್ಲದೇ, ಗ್ರಾಮಸ್ಥರಲ್ಲೂ ಸಿಎಂ ಬಾರದಿದ್ದರೇನು ಮಳೆ ಬಂತಲ್ಲ ಎಂಬ ಹರ್ಷ ಮನೆ ಮಾಡಿದೆ. ಸ್ಥಳ ಪರಿಶೀಲನೆಗಾಗಿ ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇರೂರ (ಬಿ) ಗ್ರಾಮ ಮತ್ತು ಶಾಲೆಗೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಸಿಎಂ ಬಾರದಿರುವುದು ದುಃಖವಾಗಿದೆ. ಮಳೆ ಬಂದಿದ್ದರಿಂದ ಖುಷಿಯಾಗಿದೆ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಅಷ್ಟೇ ಅಲ್ಲ, ಮತ್ತೂಮ್ಮೆ ನಮ್ಮ ಶಾಲೆಗೆ ‘ಸಿಎಂ ಸರ್’ ಅವರನ್ನು ಕರೆಸಿ ‘ಸಾರ್’ ಎಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸಚಿವರು ಸ್ಪಂದಿಸಿ ಮುಖ್ಯಮಂತ್ರಿಗಳನ್ನು ಕರೆ ತರುವ ಪ್ರಯತ್ನ ಮಾಡಲಾಗುವುದು ಎಂದು ಸಮಾಧಾನ ಪಡಿಸಿದರು.
ಕೆಲಸ ನಿಲ್ಲುವುದಿಲ್ಲ: ಭಾರೀ ಮಳೆಯಾಗಿದ್ದರಿಂದ ಅನಿರ್ವಾಯವಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮ ರದ್ದು ಮಾಡಲಾಗಿದೆ. ಸಿಎಂ ಬಂದಿಲ್ಲ ಎಂದು ಯಾರೂ ನಿರಾಶೆ ಆಗುವುದು ಬೇಡ. ಸಿಎಂ ಬಾರದೇ ಇದ್ದರೂ ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಗ್ರಾಮಕ್ಕೆ ಕರೆತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದರು. ಶುಕ್ರವಾರ ತಡರಾತ್ರಿ 2 ಗಂಟೆವರೆಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಾರ್ವಜನಿಕರ ಸುರಕ್ಷತೆ ಹಿತದೃಷಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ, 28 ಅಂಶಗನ್ನು ಒಳಗೊಂಡ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಗ್ರಾಮಸ್ಥರ ಸಹಕಾರ ಇದ್ದರೆ ನಿರೀಕ್ಷೆಗೆ ತಕ್ಕಂತೆ ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಶೀಘ್ರವೇ ಜನ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಸಚಿವರು, ಗ್ರಾಮಸ್ಥರ ಕೈಯಲ್ಲಿದ್ದ ಅಹವಾಲು ಅರ್ಜಿಗಳನ್ನು ಗಮನಿಸಿ ಸ್ಥಳದಲ್ಲೇ ಅವುಗಳನ್ನು ಸ್ವೀಕರಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಸಿಎಂ ಕಾರ್ಯಕ್ರಮದಲ್ಲಿ 25 ಸಾವಿರ ಜನರ ಸೇರುವ ನಿರೀಕ್ಷೆ ಇತ್ತು. ಕಾರ್ಯಕ್ರಮ ರದ್ದಾಗಿದ್ದರಿಂದ ನನಗೂ ನಿರಾಶೆ ಉಂಟಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರೌಢಶಾಲೆ ನಿರ್ಮಾಣಕ್ಕೆ 1.8 ಕೋಟಿ ರೂ. ಮಂಜೂರಾಗಿದೆ. ಹುಲಿಕಂಠೇಶ್ವರ ದೇವಸ್ಥಾನದ ಬಳಿ ಎರಡು ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಪಕ್ಕದ ಜೇವರ್ಗಿ ತಾಲೂಕಿನಲ್ಲಿ ಸಾಲ ಮನ್ನಾವಾಗಿದೆ. ನಮ್ಮ ಗ್ರಾಮದಲ್ಲಿ ಒಬ್ಬರಿಗೂ ಸಾಲ ಮನ್ನಾವಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತಂದರು. ಆಗ ಸಚಿವರು, ಜಿಲ್ಲೆಯಲ್ಲಿ ಈಗಾಗಲೇ 85 ಸಾವಿರ ಜನ ರೈತರ ಸಾಲ ಮನ್ನಾ ಆಗಿದೆ. ಆದರೆ, ಹೇರೂರ (ಬಿ) ಗ್ರಾಮದಲ್ಲಿ ಸಾಲ ಮನ್ನಾ ಆಗದಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಶಾಸಕ ತಿಪ್ಪಣ್ಣಪ್ಪ ಕಮಕನೂರು, ಜಿಪಂ ಸದಸ್ಯ ದಿಲೀಪ ಪಾಟೀಲ, ಡಿಸಿ ಆರ್. ವೆಂಕಟೇಶಕುಮಾರ, ಜಿಪಂ ಸಿಇಒ ಡಾ| ಪಿ. ರಾಜಾ ಇದ್ದರು.