ಕಲಬುರಗಿ: ಹಿಂದುಳಿದ ಹೈದ್ರಾಬಾದ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶಾಶ್ವತ ಕ್ರಮ ಕೈಗೊಳ್ಳಲು 10 ದಿನದೊಳಗೆ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ರಾಯಚೂರು ಜಿಲ್ಲೆ ಕರೆಗುಡ್ಡದಿಂದ ಬಸವಕಲ್ಯಾಣಕ್ಕೆ ತೆರಳುವ ಮಾರ್ಗದ ನಡುವೆ ಕಲಬುರಗಿಯಲ್ಲಿ ಕೆಲ ಕಾಲ ತಂಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೈದ್ರಾಬಾದ ಕರ್ನಾಟಕದ ಶಾಲೆಗಳ ಸ್ಥಿತಿಗತಿ ನೋಡಿಕೊಂಡು ಅಗತ್ಯವಿದ್ದಲ್ಲಿ ಶಾಲೆಗಳ ದುರಸ್ತಿ ಇಲ್ಲವೇ ಹೊಸ ಕಟ್ಟಡ ಹಾಗೂ ಹೆಚ್ಚುವರಿ ಕೋಣೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ಬರೀ ಶಾಲೆಗಳನ್ನು ನಿರ್ಮಿಸುವುದಿಲ್ಲ. ಮುಖ್ಯವಾಗಿ ಹೈ.ಕ ಭಾಗದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರೆಲ್ಲರನ್ನು ಭರ್ತಿ ಮಾಡಿ ಶೈಕ್ಷಣಿಕ ಸುಧಾರಣೆಗೆ ಮುಂದಾಗಲಾಗುವುದು. ಶಾಲಾ ಸುಧಾರಣೆ ಹಾಗೂ ಅನುದಾನ ಬಳಕೆ ಕುರಿತಾಗಿ ಎಚ್ಕೆಆರ್‌ಡಿಬಿ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ತಾವು ಕೈಗೊಳ್ಳುವ ಗ್ರಾಮ ವಾಸ್ತವ್ಯದ ಜತೆಗೆ ಇತರ ಗ್ರಾಮಗಳಲ್ಲೂ ಮೂಲ ಸೌಕರ್ಯಕ್ಕೆ ಒತ್ತು ಕೊಡಲಾಗುವುದು. ವಾಸ್ತವ್ಯ ಮಾಡುವ ಹಳ್ಳಿಗಳು ಮಾತ್ರ ಅಭಿವೃದ್ಧಿ ಹೊಂದಿದರೆ ಅದರ ಸಾರ್ಥಕತೆ ವ್ಯಾಪಕವಾಗುವುದಿಲ್ಲ. ಎಲ್ಲ ಗ್ರಾಮಗಳು ಅಭಿವೃದ್ಧಿ ಹೊಂದಬೇಕೆಂಬುದೇ ತಮ್ಮ ಉದ್ದೇಶವಾಗಿದೆ. ಹೇರೂರ ಬಿ. ಗ್ರಾಮಕ್ಕೆ ಜುಲೈ ತಿಂಗಳಲ್ಲಿ ವಾಸ್ತವ್ಯ ಹೂಡಲಾಗುವುದು. ಈಗಾಗಲೇ ಈ ಗ್ರಾಮದ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಆದೇಶ ನೀಡಲಾಗಿದೆ. ಒಟ್ಟಾರೆ ಅಂದಾಜು 500 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದರು.
ಸಮಯ ನೀಡದ ಮಹಾ ಸಿಎಂ: ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರಿಂದ ಭೀಮಾ ನದಿಗೆ ನೀರು ಬಿಡುವುದು ಸೇರಿದಂತೆ ಇತರ ವಿಷಯಗಳ ಕುರಿತಾಗಿ ಚರ್ಚಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಎರಡು ಸಲ ಸಮಯ ಕೇಳಲಾಗಿದೆ. ಆದರೆ ಅವರು ಸಮಯವನ್ನು ಕೊಟ್ಟಿಲ್ಲ ಎಂದರು.