ಕಲಬುರಗಿ: ನಿಸರ್ಗದ ನಿಯಮಗಳಡಿ ಗೌತಮ ಬುದ್ಧರು ಬೌದ್ಧ ಧರ್ಮ ಕಟ್ಟಿದ್ದಾರೆ. ಗೌತಮ ಬುದ್ಧರಿಂದ ಮಾತ್ರ ಮನುಕುಲಕ್ಕೆ ಮಾರ್ಗದರ್ಶನ ಸಾಧ್ಯ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಶನಿವಾರ ಸಿದ್ಧಾರ್ಥ್ ವಿಹಾರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 2563ನೇ ವೈಶಾಖ ಬುದ್ಧ ಪೂರ್ಣಿಮೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುದ್ಧರ ತತ್ವ ಸಿದ್ಧಾಂತಗಳಲ್ಲೇ ಮನುಕುಲದ ಏಳ್ಗೆ ಇದೆ. ಅನೇಕ ವರ್ಷಗಳಿಂದ ಅನೇಕ ರೀತಿಯಲ್ಲಿ ಗುಡಿ-ಗುಂಡಾರ, ಆಧ್ಯಾತ್ಮಿಕ ಕೇಂದ್ರಗಳು ಮತ್ತು ಮಠ-ಮಾನ್ಯಗಳು ನಡೆಯುತ್ತಿವೆ. ಆದರೆ, ಮನುಷ್ಯನ ನಿಜವಾದ ಉದ್ಧಾರಕ್ಕೆ ಕೊಡಬೇಕಾದ ಕೊಡುಗೆ ನೀಡುವಲ್ಲಿ ವಿಫಲವಾಗಿವೆ ಎಂದು ನನಗೆ ಅನಿಸುತ್ತದೆ. ಜಾತಿ ವ್ಯವಸ್ಥೆ, ಅಂಧಶ್ರದ್ಧೆ ಮನುಷ್ಯನ ಕಲ್ಪನೆಯನ್ನೇ ನೀಡದಿರುವ ವ್ಯವಸ್ಥೆ ನಮ್ಮಲ್ಲಿದೆ. ಇದು ಯಾವ ಕಾಲಕ್ಕೆ ಹೊಗಲಾಡಿಸಬಹುದು ಎಂಬುವುದು ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬುದ್ಧ ಹಾಗೂ ಬಸವಣ್ಣ ಎಂದಿಗೂ ಇಲ್ಲದ ದೇವರ ಬಗ್ಗೆ ಮಾತನಾಡಿಲ್ಲ. ಬಸವಣ್ಣನ ತತ್ವದ ಮೇಲೆ ನಡೆಯುತ್ತಿರುವ ಮಠಗಳಲ್ಲಿ ಇಂದಿಗೂ ದೇವರ ಗುಡಿಗಳನ್ನು ಕಾಣಲು ಸಾಧ್ಯವಿಲ್ಲ. ಅಲ್ಲಿ ಬಸವ ಧರ್ಮ ತತ್ವದಲ್ಲಿ ಬೋಧನೆ ಮಾಡಿದ ಸ್ವಾಮೀಜಿಗಳ ಸಮಾಧಿ ಕಾಣಬಹುದಷ್ಟೇ. ಬುದ್ಧ ಕೂಡ ಎಲ್ಲೂ ದೇವರ ಪ್ರಸ್ತಾಪವನ್ನೇ ಮಾಡಿಲ್ಲ. ಮನುಷ್ಯನ ಅವಶ್ಯಕತೆಗಳ ಬಗ್ಗೆ ಮಾತನಾಡಿದ್ದು, ಮನಕುಲದ ಏಳ್ಗೆ ಬಗ್ಗೆ ಯೋಚಿಸಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ| ತುಕಾರಾಂ ಎಸ್., ಮನುಷ್ಯ ತನ್ನ ದುಃಖ ಮತ್ತು ಸಂಕಟಗಳನ್ನು ತಾನೇ ಪರಿಹರಿಸಿಕೊಳ್ಳಬೇಕು ಎಂಬುದು ಗೌತಮ ಬುದ್ಧರ ತತ್ವ ಸಿದ್ಧಾಂತ. ಒತ್ತಾಯ, ರಕ್ತಪಾತ, ಹಿಂಸೆ ಇಲ್ಲದ ಧರ್ಮವೇ ಬೌದ್ಧ ಧರ್ಮ ಎಂದು ಬಣ್ಣಿಸಿದರು.
ಸಂಗಾನಂದ ಭಂತೇಜಿ ನೇತೃತ್ವ ವಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್. ಪಾಟೀಲ ಇದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿರಾವ ಡಿ. ಮಾಲೆ ಸ್ವಾಗತಿಸಿದರು. ಡಾ| ಎಚ್.ಟಿ.ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಚಂದ್ರಶೇಖರ ದೊಡ್ಡಮನಿ ನಿರೂಪಿಸಿದರು. ಪ್ರೊ| ಈಶ್ವರ ಇಂಗನ್ ವಂದಿಸಿದರು.