ಕಲಬುರಗಿ: ದೇಶದ ಯುವ ಜನತೆಯೇ ಭಾರತೀಯ ಜನತಾ ಪಕ್ಷದ ಶಕ್ತಿಯಾಗಿದ್ದು, ಪಕ್ಷವು ದೇಶವ್ಯಾಪ್ತಿ ವ್ಯಾಪಿಸಲು ಮತ್ತು ಬಲಿಷ್ಠವಾಗಿ ಬೆಳೆಯಲು ಯುವ ಜನಾಂಗವೇ ಕಾರಣವೆಂದು ಬಿಜೆಪಿ ಸದಸ್ಯತ್ವ ಅಭಿಯಾನದ ರಾಜ್ಯ ಘಟಕದ ಸಹ ಸಂಚಾಲಕ ಜಗದೀಶ ಹಿರೇಮನಿ ಹೇಳಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶನಿವಾರ ಬಿಜೆಪಿಯ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲೂ ಯುವಕರನ್ನೇ ಸೆಳೆದು ಪಕ್ಷವನ್ನು ಮತ್ತಷ್ಟು ಬಲ ಪಡಿಸಬೇಕೆಂದು ಕೆರ ನೀಡಿದರು.
ಬಿಜೆಪಿ ದೇಶ, ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಹಲವು ಯುವಕರಿಗೆ ಪ್ರಧಾನಿ ಮೋದಿ ಸ್ಫೂರ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಬಿಜೆಪಿ ಸದಸ್ಯತ್ವ ಹೊಂದಿದವರ ಸಂಖ್ಯೆ ಬೆಳೆಯಬೇಕಿದೆ. ಸದ್ಯ ಇರುವ ಸದಸ್ಯತ್ವಕ್ಕಿಂತ ಶೇ.20ರಷ್ಟು ಹೆಚ್ಚು ಜನರನ್ನು ಬಿಜೆಪಿಯೊಂದಿಗೆ ನೋಂದಾಯಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ಸದಸ್ಯತ್ವದ ಆಧಾರದ ಮೇಲೆ ಎ, ಬಿ ಮತ್ತು ಸಿ ಗ್ರೇಡ್ ಬೂತ್‌ಗಳೆಂದು ಗುರುತಿಸಲಾಗಿದೆ. ಬಿ ಹಾಗೂ ಸಿ ಗ್ರೇಡ್ ಬೂತ್‌ಗಳನ್ನು ಎ ಗ್ರೇಡ್ ಬೂತ್‌ಗಳನ್ನಾಗಿ ಪರಿವರ್ತಿಸಲು ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಿಸಬೇಕು. ಯಾರೂ ನಿರ್ಲಕ್ಷ್ಯ ಮತ್ತು ಮೈಗಳ್ಳತನ ಮಾಡುವಂತಿಲ್ಲ ಎಂದು ಹೇಳಿದರು.
ಶಾಸಕರಾದ ಬಸವರಾಜ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಎಚ್. ಮಲಾಜಿ, ವಿದ್ಯಾ ಹಾಗರಗಿ, ಯುವ ಮುಖಂಡರಾದ ಚಂದು ಪಾಟೀಲ, ರವಿ ಬಿರಾದಾರ, ರಾಜು ನೀಲಂಗೆ, ಮಹಾದೇವ ಬೆಳಮಗಿ, ಶರಣು ಮಡಿವಾಳ ಹಾಗೂ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ನಗರದ ಖಾದ್ರಿ ಚೌಕ್‌ನಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ನೇತೃತ್ವದಲ್ಲಿ ಉತ್ತರ ಮತಕ್ಷೇತ್ರ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನವನ್ನು ಬಿಜೆಪಿ ಸದಸ್ಯರಾಗೋಣ ಕಾರ್ಯಕ್ರಮಕ್ಕೆ ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಉದ್ಘಾಟಿಸಿದರು. ಬಿಜೆಪಿ ಸದಸ್ಯ ಅಭಿಯಾನದ ರಾಜ್ಯ ಸಹ ಸಚಾಲಕ ಜಗದೀಶ ಹೀರೆಮನಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಗಂಗಾ ಭೋಷಣ ಸೋಮಾಣಿ, ಅಂಬಾರಾಯ ಅಷ್ಟಗಿ, ಶಿವಾನಂದ ಭಂಡಕಿ, ಚನ್ನವೀರ ಲಿಂಗನವಾಡಿ, ಸಾವಿತ್ರಿ ಕುಳಗೇರಿ, ಮಹೇಶ ಪಟ್ಟಣ, ವಿದ್ಯಾಸಾಗರ ಕುಲಕರ್ಣಿ, ವರ್ದಶಂಕರ್ ಶೆಟ್ಟಿ, ಶರಣು ಮಡಿವಾಳ, ಅನಿಲ ಜಾಧವ ಇದ್ದರು.