Advertisement

ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಊರ್ಜಿತವಾಗಲ್ಲ :ಗೋಪಾಲಗೌಡ

12:55 PM Jul 08, 2019 | Naveen |

ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆ 2013ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ಅದನ್ನು ಅಂಗೀಕರಿಸಿದರೂ, ಆ ಕಾಯ್ದೆ ನ್ಯಾಯಾಲಯದಲ್ಲಿ ಊರ್ಜಿತಗೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

Advertisement

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ಕರ್ನಾಟಕ ಪ್ರಾಂತ ರೈತ ಸಂಘ ರೈತಪರ ಭೂಸ್ವಾಧೀನ ಕಾಯ್ದೆ-2013ಕ್ಕೆ ರೈತ ವಿರೋಧಿ ತಿದ್ದುಪಡಿ ಅಂಗೀಕರಿಸಿದ್ದನ್ನು ಕೈಬಿಡಲು ಒತ್ತಾಯಿಸಿ ಮತ್ತು 1964ರ ಭೂ ಕಂದಾಯ ಕಾನೂನು ಕಲಂ 109 ಅಡಿಯಲ್ಲಿ ಕೈಗಾರಿಕೆಗಳಿಗೆ ಭೂಮಿ ಖರೀದಿ ನಿಲ್ಲಿಸುವಂತೆ ಹಾಗೂ ಈಗಾಗಲೇ ಖರೀದಿಸಿದ ಭೂಮಿಗೆ ಯೋಗ್ಯ ಪರಿಹಾರಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ‘ಭೂ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಕೇಂದ್ರ ಸರ್ಕಾರ ಸರ್ವರ ಸಮ್ಮತಿ ಮೇರೆಗೆ ರೈತ ಪರ ಭೂಸ್ವಾಧೀನ ಕಾಯ್ದೆ-2013 ಅನ್ನು ರೂಪಿಸಿದೆ. ಕೇಂದ್ರ ಸರ್ಕಾರ ರೂಪಿಸಿದ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ವಿಧಾನಸಭೆಗೆ ಅಧಿಕಾರವಿಲ್ಲ. ಒಂದು ವೇಳೆ ಮಾಡಿದರೂ ಅದಕ್ಕೆ ಪೂರಕವಾಗಿರುವ ಅಂಶಗಳನ್ನು ರಾಷ್ಟ್ರಪತಿಗಳ ಅನುಮತಿ ಪಡೆದುಕೊಂಡು ಸೇರಿ ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ, ಯಾವುದೇ ಕಾರಣಕ್ಕೂ ಕಾಯ್ದೆಗೆ ತದ್ವಿರುದ್ಧವಾಗಿರುವ ಅಂಶಗಳನ್ನು ಸೇರಿಸಲು ಅವಕಾಶವಿಲ್ಲ ಎಂದರು.

ಕಾಯ್ದೆಯಲ್ಲಿ ತದ್ವಿರುದ್ಧವಾದ ಅಂಶಗಳು ಇದ್ದಾಗ ರಾಷ್ಟ್ರಪತಿಗಳ ಅನುಮತಿ ಪಡೆದು ತಿದ್ದುಪಡಿ ಅಂಗೀಕರಿಸಿದರೂ ಅದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲಿ ಊರ್ಜಿತಗೊಳ್ಳೋದಿಲ್ಲ ಎನ್ನುವ ಅಂಶವನ್ನು ಅವರು, ಹಲವು ಪ್ರಕರಣಗಳನ್ನು ಉಲ್ಲೇಖೀಸಿ ಉದಾಹರಣೆ ಸಹಿತ ವಿವರಿಸಿದರು.

ರಾಜ್ಯ ಸರ್ಕಾರ ಬಂಡವಾಳಶಾಹಿ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಕಾಯ್ದೆಯಲ್ಲಿ ರೈತ ವಿರೋಧಿ ಅಂಶಗಳನ್ನು ಸೇರ್ಪಡೆಗೊಳಿಸಿರುವುದು ಸಂವಿಧಾನ ವಿರೋಧಿ ಮತ್ತು ಅತ್ಯಂತ ಅಪಾಯಕಾರಿ ನಿರ್ಧಾರವಾಗಿದೆ. ತಿದ್ದುಪಡಿ ಕಾಯ್ದೆಯು ಭೂ ಸ್ವಯಂ ಪ್ರೇರಿತ ಸ್ವಾಧೀನ ಅಂಶವನ್ನು ಒಳಗೊಂಡಿದ್ದು, ಇದರ ವಿರುದ್ಧ ರೈತ ಮುಖಂಡರು ಗಟ್ಟಿ ದನಿ ಎತ್ತಬೇಕು. ಕೇಂದ್ರ ಸರ್ಕಾರದ ಕಾಯ್ದೆಗೆ ತದ್ವಿರುದ್ಧವಾದ ತಿದ್ದುಪಡಿಯನ್ನು ರಾಜ್ಯ ಸರ್ಕಾರ ತಂದಿದೆ ಎಂಬುವುದು ನ್ಯಾಯ ಪೀಠಕ್ಕೆ ಮನದಟ್ಟು ಮಾಡಿಕೊಡುವ ಕೆಲಸವಾಗಬೇಕು ಎಂದರು.

Advertisement

ನಮಗೆ ಅನ್ನ ಕೊಡುವ ರೈತರು ಮುಖ್ಯವಾಗಬೇಕೇ ಹೊರತು ಸ್ಟೀಲ್, ಉಕ್ಕು ತಯಾರಿಕಾ ಕಂಪನಿಗಳಲ್ಲ. ಸಮಾಜಕ್ಕಾಗಿ ಬೇಕಾದ ಶಾಲೆ-ಕಾಲೇಜು, ಆಸ್ಪತ್ರೆ, ನೀರಾವರಿ ಯೋಜನೆಗಳಿಗೆ ಫಲವತ್ತಲ್ಲದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಿ. ಆದರೆ, ಜನಹಿತದ ಹೆಸರಲ್ಲಿ ಸ್ವಾರ್ಥದ ಕೈಗಾರಿಕೆಗಳಿಗೆ ರೈತರು ಭೂಮಿ ಕೊಡುವುದು ಬೇಡ ಎಂದು ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಸರ್ಕಾರಗಳು ಕಲಂ 109 ಅಡಿಯಲ್ಲಿ ಭೂಮಿಯನ್ನು ಕೈಗಾರಿಕೆಗಳಿಗೆ ಖರೀದಿಸಲು ಅವಕಾಶ ನೀಡಬಾರದು. ಇದರಿಂದ ಸೂಕ್ತ ಪರಿಹಾರ ರೈತರಿಗೆ ಸಿಗುವುದಿಲ್ಲ. ಈ ಕಾಯ್ದೆಯಡಿ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಕೈಗಾರಿಕೆಗಳಿಗೆ ಈ ಕಾಯ್ದೆಯನ್ನು ಜಾರಿಗೊಳಿಸಿ, ಕೈಗಾರಿಕೆಗಳಿಗೆ ಉಚಿತ ಭೂಮಿ ನೀಡುತ್ತಿವೆ ಎಂಬ ನೆಪವನ್ನು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ತಿದ್ದುಪಡಿ ಕಾಯ್ದೆ ರೈತರಿಗೆ ಮರಣಶಾಸನದಂತಿದೆ. ಹೀಗಾಗಿ ಕೂಡಲೇ ಸರ್ಕಾರ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಇಲ್ಲವಾದಲ್ಲಿ ರೈತರ ಬೃಹತ್‌ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್‌.ಕೆ. ಕಾಂತಾ, ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಯು.ಬಸವರಾಜ, ಗೌರಮ್ಮ ಪಾಟೀಲ, ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಅಲ್ತಾಫ್‌ ಇನಾಮದಾರ, ಪಾಂಡುರಂಗ ಮಾವಿನ್‌, ಸುಧಾಮ ಧನ್ನಿ, ಸುಭಾಷ ಹೊಸಮನಿ ಹಾಗೂ ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next