Advertisement
ಮಳೆಗಾಲದಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಬಂದಾಗ ಹರಿದು ಹೋಗುವ ಹೆಚ್ಚುವರಿ ನೀರನ್ನು ಭೋರಿ ನದಿ ಹಾಗೂ ಆಳಂದ ತಾಲೂಕಿನ ಅಮರ್ಜಾ ಜಲಾಶಯಕ್ಕೆ ಜತೆಗೆ ಅಫಜಲಪುರ, ಆಳಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 319 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, 2021ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಸಮಯ ನಿಗದಿ ಮಾಡಲಾಗಿದೆ.
Related Articles
Advertisement
ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭದಿಂದಲೂ ಕುಡಿಯುವ ನೀರಿನ ತೊಂದರೆ ತೀವ್ರವಾಗಿ ಅನುಭವಿಸುತ್ತಿದೆ. ಕೆಲವು ಸಲ ನೀರಿನ ತೊಂದರೆಯಿಂದ ರಜೆ ನೀಡಲಾಗಿದೆ. ಆದರೆ ಈ ಯೋಜನೆ ಪೂರ್ಣಗೊಂಡು ಅಮರ್ಜಾ ಜಲಾಶಯಕ್ಕೆ ನೀರು ತುಂಬಿದಲ್ಲಿ ಕೇಂದ್ರೀಯ ವಿವಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ. ಅಲ್ಲದೇ ಅಫಜಲಪುರ ತಾಲೂಕಿನ ಬಂದರವಾಡ ಬಳಿಯೂ 68 ಕೋಟಿ ರೂ. ವೆಚ್ಚದಲ್ಲಿ ಜಾಕವೆಲ್ವೊಂದನ್ನು ರೂಪಿಸಲು ಡಿಪಿಆರ್ ರೂಪಿಸಲಾಗಿದೆ. ಇದಕ್ಕೂ ಟೆಂಡರ್ ಕರೆಯಲು ಮುಂದಾಗಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕನ್ನು ಪ್ರವೇಶಿಸಿ ಜಿಲ್ಲೆಯಲ್ಲಿ 110 ಕಿ.ಮೀ ಭೀಮಾ ನದಿ ಹರಿಯಲಿದ್ದು, ಕೃಷ್ಣಾ ನೀರು ಹಂಚಿಕೆ ಪ್ರಾಧಿಕಾರದ ಪ್ರಕಾರ 15 ಟಿಎಂಸಿ ನೀರು ಬಳಸುವ ಅಧಿಕಾರವಿದೆ. ಭೀಮಾ ಏತ ನೀರಾವರಿ ಹಾಗೂ ಸನ್ನತಿ ಮತ್ತು ಕೆಬಿಜೆಎನ್‌ಎಲ್ ಕಾಮಗಾರಿಗಳಿಂದ ಈ ನೀರನ್ನು ಬಳಕೆ ಮಾಡಲಾಗುತ್ತಿದೆ. ಆದರೂ ಒಟ್ಟಾರೆ ಹಂಚಿಕೆ ಪ್ರಮಾಣದ ನೀರು ಸಂಪೂರ್ಣ ಬಳಕೆ ಮಾಡಲಿಕ್ಕಾಗುತ್ತಿಲ್ಲ. ಭೋರಿ ಹಾಗೂ ಅಮರ್ಜಾ ಜಲಾಶಯ ಮತ್ತು ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ಪೂರ್ಣಗೊಂಡಲ್ಲಿ ಆಗಾಗ್ಗೆ ಎದುರಾಗುವ ಭೀಮಾ ನದಿ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿಸುವುದರ ಜತೆಗೆ ನೀರಾವರಿ ಕೃಷಿ ಹೆಚ್ಚಳ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಲಿದೆ. ವಿಳಂಬವಾಗದೇ ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಯಬೇಕು ಎನ್ನುತ್ತಾರೆ ರೈತರು ಹಾಗೂ ಸಾರ್ವಜನಿಕರು.