Advertisement

ಧಾರ್ಮಿಕ ಸಂಸತ್‌ ಕಲ್ಪನೆ ನೀಡಿದ್ದೇ ಬಸವಣ್ಣ: ದೇಶಮುಖ

10:33 AM May 08, 2019 | Naveen |

ಕಲಬುರಗಿ: ಪ್ರಸ್ತುತ ಸಮಾಜ ಈಗಲೂ ಸಾಧಿಸಲು ಆಗದೇ ಇರುವ ಸಮ ಸಮಾಜದ ಕನಸನ್ನು, 12ನೇ ಶತಮಾನದಲ್ಲಿ ಬಸವಣ್ಣನವರು ನನಸಾಗಿಸಲು ಶ್ರಮಿಸಿದ್ದರು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

Advertisement

ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವಣ್ಣನವರ 886ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಧಾರ್ಮಿಕ ಸಂಸತ್ತಿನ ಕಲ್ಪನೆ ನೀಡಿ ಅದಕ್ಕೆ ಅನುಭವ ಮಂಟಪ ಎನ್ನುವ ಹೆಸರು ಕೊಟ್ಟು ಅಲ್ಲಿ ಎಲ್ಲ ವರ್ಗದ ಶರಣ ಶರಣೆಯರಿಗೆ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಿದರು. ಇದು ಶೋಷಣೆಗೆ ಒಳಗಾಗಿದ್ದ ವರ್ಗಗಳಿಗೆ ಮೇಲೆ ಬರಲು ಸಹಾಯಕವಾಯಿತು ಎಂದರು.

ಹಲವು ವರ್ಗದ ವಚನಕಾರರು ಅನುಭವ ಮಂಟಪದಿಂದ ಮುನ್ನೆಲೆಗೆ ಬಂದರು. ಇದರಿಂದ ಬಹುದೊಡ್ಡ ವಚನ ಕ್ರಾಂತಿಯೇ ನಡೆಯಿತು. ಮಹಿಳೆಯರು ಕೂಡ ಪುರುಷರ ಸಮಾನರಾಗಿ ವಚನಗಳನ್ನು ಬರೆದು ಸಮಾಜ ಸುಧಾರಣೆಗೆ ತಮ್ಮ ವಿಚಾರಗಳನ್ನು ಮಂಡಿಸಿದರು ಎಂದರು.

ಬಸವೇಶ್ವರರ ಮತ್ತು ಶರಣಬಸವೇಶ್ವರರ ವಚನಗಳ ಆಧಾರದ ಮೇಲೆಯೇ ಶರಣ ಸಂಸ್ಥಾನವು ಕಾರ್ಯನಿರತವಾಗಿದೆ. ಬಸವಣ್ಣನವರು ಪ್ರಸ್ತುತ ಪಡಿಸಿದ ಕಾಯಕ ಮತ್ತು ದಾಸೋಹ ತತ್ವವನ್ನು ಶರಣಬಸವೇಶ್ವರ ಸಂಸ್ಥಾನವು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದೆ. ಬಸವಣ್ಣ ಮತ್ತು ಶರಣಬಸವೇಶ್ವರರ ತತ್ವ ಮತ್ತು ಸಿದ್ಧಾಂತಗಳ ನಡುವೆ ಸಮೀಪದ ಸಂಬಂಧವಿದೆ. ಬಸವಣ್ಣನವರು ಬಸವಕ ಲ್ಯಾಣವನ್ನು ಕರ್ಮಭೂಮಿಯಾಗಿ ಸ್ವೀಕರಿಸಿದರೆ, ಶರಣಬಸವೇಶ್ವರರು ಮತ್ತು ದೊಡ್ಡಪ್ಪ ಶರಣರು ಕಲಬುರಗಿ ವಿಭಾಗದಲ್ಲಿ ಹಸಿದ ಹೊಟ್ಟೆಗಳಿಗೆ ದಾಸೋಹ ನೀಡುವುದರ ಮೂಲಕ ಸೇವಾ ಕಾರ್ಯ ಆರಂಭಿಸಿದರು ಎಂದರು.

8ನೇ ದಾಸೋಹ ಪೀಠಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅವರು ಬಸವೇಶ್ವರರ ಆಶಯದಂತೆ ದಾಸೋಹವನ್ನು ಅನ್ನ ದಾಸೋಹ ಮತ್ತು ಜ್ಞಾನ ದಾಸೋಹದ ರೂಪದಲ್ಲಿ ಈ ಭಾಗದಲ್ಲಿ ಉಣ ಬಡಿಸುತ್ತಿದ್ದಾರೆ. ಸಂಸತ್‌ ಭವನದ ಆವರಣದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸಲು ಅಂದಿನ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಡಾ| ಶರಣಬಸವಪ್ಪ ಅಪ್ಪ ಚರ್ಚಿಸಿ ಮೂರ್ತಿ ಸ್ಥಾಪಿಸಲು ಕಾರಣರಾಗಿದ್ದಾರೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಟಿ ಮಾತನಾಡಿ, ಕರ್ನಾಟಕವು ಬಸವಣ್ಣನವರಂತಹ ಮೇಧಾವಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಬಸವಣ್ಣನವರ ಸುಧಾರಣಾ ತತ್ವ, ಜಾತಿ ರಹಿತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಕಾಯಕ ತತ್ವವು ಕಾರ್ಮಿಕರ ಘನತೆ ಎತ್ತಿ ಹಿಡಿದು, ಕಾಯಕವೇ ಕೈಲಾಸ ಎಂದು ತಿಳಿಸಿದೆ ಎಂದು ಹೇಳಿದರು. ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್‌ ಡಾ| ಲಕ್ಷ್ಮೀ ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಂ.ಎಸ್‌. ಪಾಟೀಲ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್‌ ಹಾಗೂ ಇತರರು ಇದ್ದರು.

ಡಾ| ಸುಮಿತ್ರಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಮಾದಗೊಂಡ ಸ್ವಾಗತಿಸಿದರೆ, ನಿಖೀತಾ ಬಳಬಟ್ಟಿ ನಿರೂಪಿಸಿದರು. ನಾಗಮ್ಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next