Advertisement

ಮನುಷ್ಯರಿಗೆ ಬಸವ ತತ್ವ ಅನಿವಾರ್ಯ: ಕೂಡಲಸಂಗಮ ಶ್ರೀ

12:43 PM May 12, 2019 | Naveen |

ಕಲಬುರಗಿ: ವಿಶ್ವಜ್ಯೋತಿ ಬಸವಣ್ಣನವರ ತತ್ವ ಜಾಗತಿಕ ತತ್ವವಾಗಿದ್ದು, ಮನುಷ್ಯರಿಗೆ ಬಸವ ತತ್ವ ಅನಿವಾರ್ಯ ಎಂದು ಕೂಡಲಸಂಗಮದ ಪಂಚಮಶಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬಸವೇಶ್ವರ ವೃತ್ತದ ಬಳಿಯಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಶನಿವಾರ ಬಸವ ಜಯಂತಿ ಉತ್ಸವದ ಐದನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣ ಎಂದರೆ ಕ್ರಾಂತಿ, ಕ್ರಾಂತಿ ಎಂದರೆ ಬಸವಣ್ಣ. ಕಲ್ಯಾಣ ನಾಡಾದ ಕಲಬುರಗಿ ನೆಲದಲ್ಲಿ ಬಸವಣ್ಣನವರ ಜಯಂತಿ ಉತ್ಸವ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರವಾರದ ಬಸವಧಾಮದ ಬಸವ ರಾಜೇಶ್ವರಿ ಮಾತಾಜಿ ಮಾತನಾಡಿ, ನಮ್ಮಪ್ಪ ಬಸವಣ್ಣ, ನಮ್ಮವ್ವ ವಚನ ಸಾಹಿತ್ಯ. ಲಿಂಗಾಯತ ಧರ್ಮದ ಡಿಎನ್‌ಎ ಪರೀಕ್ಷೆ ಮಾಡಿದರೆ ನಮ್ಮಪ್ಪ ಬಸವಣ್ಣ ಎಂದು ಫಲಿತಾಂಶ ಬರುತ್ತದೆ ಎಂದರು.

ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಕಾಲದಲ್ಲೇ ಮಹಿಳೆಯರಿಗೆ ಅವಕಾಶ ಕೊಟ್ಟರೆ, ಪುರುಷನಿಗಿಂತ ಮುಂದೆ ಬರುವಳು ಎಂದು ತೋರಿಸಿಕೊಟ್ಟಿದ್ದು ಬಸವಣ್ಣನವರು ಎಂದು ಹೇಳಿದರು.

ಶರಣರು ಮತ್ತು ಮಹಿಳಾ ಸಂವೇದನೆ ಬಗ್ಗೆ ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್‌. ಮಠಪತಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರನ್ನು ಹೀನ ಸ್ಥಿತಿಯಲ್ಲಿ ಕಾಣಲಾಗುತ್ತಿತ್ತು. ಮಹಿಳೆಯರು ದೇವತಾ ಸಮಾನರು ಎನ್ನುತ್ತಿದ್ದರೂ ಅವರಿಗೆ ಸ್ವಾತಂತ್ರ್ಯ ನಿರಾಕರಿಸಲಾಗಿತ್ತು. ಮಹಿಳೆಯರನ್ನು ಗೌರವಿಸುವ, ಆರಾಧಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಧ್ವನಿ ಕೊಟ್ಟಿದ್ದು ಬಸವಣ್ಣನವರು. ಅನುಭವ ಮಂಟಪದಲ್ಲಿ 33 ಮಹಿಳೆಯರು ವಚನಗಳನ್ನು ಬರೆಯ ತೊಡಗಿದರು. ಮನೆಗಳನ್ನು ಮಹಾಮನೆಗಳನ್ನಾಗಿ ಮಾಡುವ ಶಕ್ತಿಯನ್ನು ಶರಣರು ತುಂಬಿದರು ಎಂದರು.

Advertisement

ಇದೇ ವೇಳೆ ಮಾಜಿ ಸಚಿವ ಎಸ್‌.ಕೆ. ಕಾಂತಾ, ಎಂ.ಕೆ.ಆರ್ಟ್‌ನ ಮಲ್ಲಿಕಾರ್ಜುನ ಜನವಾಡ, ಎಲ್.ಬಿ.ಕೆ. ಆಲ್ದಾಳ, ಸಂಬಣ್ಣ ಹೊಳಕುಂದಿ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗುಂಡಣ್ಣ ಡಿಗ್ಗಿ, ಸಾಯಬಣ್ಣ ಹೋಳ್ಕರ್‌, ಬಿ.ಎಚ್.ಭಜಂತ್ರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ ನಮೋಶಿ, ಬಸವ ಉತ್ಸವ ಸಮಿತಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಕಾರ್ಯಾಧ್ಯಕ್ಷ ಬಿ.ಎಂ.ರಾಂಪುರೆ, ಮಾಜಿ ಮೇಯರ್‌, ಶರಣಕುಮಾರ ಮೋದಿ, ಆರ್‌.ಜಿ. ಶೆಟಗಾರ, ರವೀಂದ್ರ ಶಾಬಾದಿ, ಬಸವರಾಜ ಮೊರಬದ, ಗುರುಬಸಪ್ಪ ಪಾಟೀಲ, ಅರ್ಜುನ ಭದ್ರೆ, ಸಚಿನ್‌ ಫರಹತಾಬಾದ್‌, ಧನರಾಜ ಜೀಗರೆ, ಶಂಕರ ಹೂಗಾರ, ಮಸ್ತಾನ ಬಿರಾದಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next