ಕಲಬುರಗಿ: ಛುಕ್‌ಬುಕ್…ಛುಕ್‌ಬುಕ್.. ಎನ್ನುವ ಶಬ್ದವಿಲ್ಲದೇ ಕುಗ್ರಾಮಕ್ಕೆ ಬಂತು ನಲಿಕಲಿ ನಂದಾದೀಪ ಫಲಕ ಹಾಕಿದ ಎಕ್ಸಪ್ರಸ್ ರೈಲು. ಈ ರೈಲು ಬರುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಡಬಡನೆ ಹತ್ತಿದರು. ಆದರೂ ರೈಲು ಮುಂದಕ್ಕೆ ಹೋಗಲಿಲ್ಲ, ಹೋಗದಿದ್ದರೂ ರೈಲಿನಲ್ಲಿ ಕುಳಿತಂತೆ ಭಾಸವಾಗುತ್ತಿತ್ತು.
ಇಂತಹದೊಂದು ಘಳಿಗೆಗೆ ಸಾಕ್ಷಿಯಾಗಿದ್ದು ಗುರು ಬಂಗರಗಿ ಕಲಾ ತಂಡ. ಈ ತಂಡ ತಾಲೂಕಿನ ಗಡಿ ಭಾಗದ ಪುಟ್ಟ ಕುಗ್ರಾಮ ಬಸನಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಮುಖ್ಯ ಶಿಕ್ಷಕರು ಹಾಗೂ ದಾನಿಗಳ ನೆರವಿನಿಂದ ಬಿಡಿಸಿದ ರೈಲಿನ ವರ್ಣಚಿತ್ರ ಹಾಗೂ ತ್ರೀಡಿ ಮಾದರಿಯ ನಲಿಕಲಿ ಕೋಣೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ಕೂಲಿ ಮಾಡುವವರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಹ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಈ ಕುಗ್ರಾಮದಲ್ಲಿನ ಶಾಲೆಯು ತನ್ನದೇ ಆದ ರೀತಿಯಲ್ಲಿ ಆಕರ್ಷಣೆಗೆ ಒಳಗಾಗಿದೆ. ಶಾಲೆಯ ಅಭಿವೃದ್ಧಿಗಾಗಿ ದಾನಿಗಳ ಸಹಕಾರ ಪಡೆದು, ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಸತತ ಪ್ರಯತ್ನ ಆರಂಭವಾಗಿದೆ. ಶಾಲಾ ಪ್ರಭಾರಿ ಮುಖ್ಯಶಿಕ್ಷಕ ವಿಠ್ಠಲ ಗೌರಶೆ ಶಾಲೆಗೆ ರೈಲು ಮಾದರಿ ನೀಡಲು ಸಹಕಾರ ನೀಡಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯ ಚಂದ್ರಕಾಂತ ಶಕಾಪುರ ಅವರ ಸಹಾಯದಿಂದ ಎರಡು ಕೋಣೆಗಳಿಗೆ ತ್ರೀಡಿ ಮಾದರಿಯಲ್ಲಿ ಬಣ್ಣ ಲೇಪನ ಮಾಡಿ ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಮಾಡಲು ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಶಾಲೆಯ ಶಿಕ್ಷಕ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಹುಸೇನ್ ವಡಗೇರಿ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಳಪ್ಪ ಯಳಸಂಗಿ ಅವರು ಮಾದರಿ ಶಾಲೆ ಮಾಡುವ ಉದ್ದೇಶದಿಂದ ಮೂರು ಕೋಣೆಗಳಿಗೆ ಅಂದವಾದ ನೆಲಹಾಸಿಗೆ ಕೊಡಿಸಿದ್ದಲ್ಲದೇ, ಶಾಲೆ ಆವರಣದಲ್ಲಿ ನೂರು ಗಿಡಗಳನ್ನು ನೀಡಿ ಪರಿಸರ ಉತ್ತಮಗೊಳ್ಳುವಂತೆ ಸಹಕರಿಸಿದ್ದಾರೆ. ಇನ್ನೊಬ್ಬ ಶಿಕ್ಷಣ ಪ್ರೇಮಿ ಸುರೇಶ ನಿಂಬರ್ಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಸಮವಸ್ತ್ರಕ್ಕಾಗಿ ಧನಸಹಾಯ ಮಾಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿರುವ ಶರಣಗೌಡ ಪಾಟೀಲರು ಶಾಲಾ ಅಭಿವೃದ್ಧಿಗಾಗಿ ಧನಸಹಾಯ ನೀಡಿದ್ದಾರೆ.
ಈರಣ್ಣ ಮಾಲಗತ್ತಿ ಅವರು ಶಾಲೆಗೆ ಬೇಕಾದ ಪರಿಕರಗಳನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ. ಶಾಲೆ ಉನ್ನತಿಗಾಗಿ ದಾನಿಗಳ ಮನವೊಲಿಸುವ ಕಾರ್ಯವನ್ನು ನಿಕಟಪೂರ್ವ ಮುಖ್ಯ ಶಿಕ್ಷಕ ವಿಠಲ ಗೌರಶೆ, ಶಾಲೆ ನಾವಿನ್ಯತೆ ಕುರಿತು ಸದಾಕಾಲ ಕನಸು ಕಾಣುವ ಶಿಕ್ಷಕ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿ ಹುಸೇನ್ ವಡಗೇರಿ ಅವರ ಪಾತ್ರ ಶ್ಲಾಘನೀಯವಾಗಿದೆ ಎಂದು ಶಾಲೆ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಕುಂಬಾರ ಬಣ್ಣಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ , ಅಜೀಂ ಪ್ರೇಮಜಿ ಫೌಂಡೇಶನ್ ಜಿಲ್ಲಾ ನೋಡಲ್ ಅಧಿಕಾರಿ ಮಹಾದೇವ ಮೂಲಗೆ, ಸಮೂಹ ಸಂಪನ್ಮೂಲ ವ್ಯಕ್ತಿ ಅರುಣಕುಮಾರ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಾದ ಸಿದ್ರಾಮ ಲೋಣಿ, ಯಮನಪ್ಪ ಭಜಂತ್ರಿ, ನಿಷ್ಕಲೇಶಯ್ಯ ಹಿರೇಮಠ, ರಾಧಾ ಕೆ., ಅತಿಥಿ ಶಿಕ್ಷಕರಾದ ರಮೇಶ ಪೂಜಾರಿ, ಇಂದಿರಾ ಕಲಬುರಗಿ, ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ದಶರಥ ಬಸವಪಟ್ಟಣ, ಶಾಲಾ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಜಟ್ಟೆಪ್ಪ ಎಸ್. ಶಕಾಪುರ, ಗ್ರಾ.ಪಂ ಸದಸ್ಯ ಸಿದ್ರಾಮ ಹಾವನೂರ, ಶಿಕ್ಷಣ ಪ್ರೇಮಿ ಲಕ್ಷ್ಮೀಪುತ್ರ ಅಕ್ಕಲಕೋಟ ಹಾಗೂ ಗ್ರಾಮಸ್ಥರು ಶಾಲೆಯನ್ನು ಮಾದರಿಯಾಗಿಸುವ ಸಂಕಲ್ಪ ತೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ.