Advertisement

ಬಂದೇ ನವಾಜ್‌ ದರ್ಗಾ ಉರುಸು ಆರಂಭ

11:14 AM Jul 20, 2019 | Naveen |

ಕಲಬುರಗಿ: ಬಸವಾದಿ ಶರಣರು, ಸೂಫಿ ಸಂತರ ನಾಡಿನ ಹಿಂದೂ-ಮುಸ್ಲಿಮರ ಭಾವೈಕ್ಯತೆ ಧಾರ್ಮಿಕ ಕ್ಷೇತ್ರವಾದ ನಗರದ ಹಜರತ್‌ ಖಾಜಾ ಬಂದೇ ನವಾಜ್‌ ದರ್ಗಾದ 615ನೇ ಉರುಸು ಶುಕ್ರವಾರದಿಂದ ಅದ್ದೂರಿಯಾಗಿ ಆರಂಭವಾಗಿದೆ.

Advertisement

ದಕ್ಷಿಣದ ಭಾರತದ ಅಜ್ಮೇರ್‌ ಎಂದೇ ಖಾಜಾ ಬಂದೇ ನವಾಜ್‌ ದರ್ಗಾ ಪ್ರಸಿದ್ಧಿ ಪಡೆದಿದೆ. 14ನೇ ಶತಮಾನದ ಸೂಫಿ ಸಂತ ಖಾಜಾ ಬಂದೇ ನವಾಜ್‌ ದೇಶ-ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಶುಕ್ರವಾರ ಸಂಜೆ ಸಂದಲ್ (ಗಂಧ) ಮೆರವಣಿಗೆ ಮೂಲಕ ಉರುಸು ಪ್ರಾರಂಭಗೊಂಡಿತು.

ಮಹೆಬೂಬ್‌ ಗುಲ್ಶನ್‌ ಉದ್ಯಾನವನದಿಂದ ಸಂಜೆ 6:30ಕ್ಕೆ ಆರಂಭವಾದ ಸಂದಲ್ (ಗಂಧ) ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಹಾಯ್ದು ರಾತ್ರಿ 10 ಗಂಟೆಗೆ ದರ್ಗಾ ತಲುಪಿತು. ವಿಜೃಂಭಣೆಯಿಂದ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ಸೇರಿದಂತೆ ವಿವಿಧ ಧರ್ಮಗಳ ಸಾವಿರಾರು ಜನರು ಭಾಗವಹಿಸಿದ್ದರು. ನಂತರ ರಾತ್ರಿಯಿಡಿ ಖ್ಯಾತ ಕಲಾವಿದರು ಕವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಬೆಳಗ್ಗೆಯಿಂದಲೇ ಅನೇಕ ಭಾಗಗಳಿಂದ ಭಕ್ತರು ವಾಹನಗಳನ್ನು ಮಾಡಿಕೊಂಡು ತಂಡೋಪ ತಂಡವಾಗಿ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಖಾಜಾ ಬಂದೇ ನವಾಜ್‌ ಅವರ ಹಾಗೂ ಕುಟುಂಬಸ್ಥರ ಮಜಾರ್‌ಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ಉರುಸು ಪ್ರಯುಕ್ತ ದರ್ಗಾವನ್ನು ಸಂಪೂರ್ಣ ದೀಪಾಲಂಕಾರ ಮಾಡಲಾಗಿದ್ದು, ದರ್ಗಾದ ಆವರಣ ಬಣ್ಣ-ಬಣ್ಣದ ದೀಪಗಳಿಂದ ಜಗಮಗಿಸುತ್ತಿದೆ.

ಉಳಿಯಲಿರುವ ಭಕ್ತರು: ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆಯ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ಭಕ್ತಾದಿಗಳು ಎರಡ್ಮೂರು ದಿನ ಇಲ್ಲಿಯೇ ನೆಲೆಸುತ್ತಾರೆ. ಹಲವು ಭಕ್ತರು ಉರುಸು ಮುನ್ನಾ ದಿನ ಬುಧವಾರ ರಾತ್ರಿಯೇ ಬಂದಿದ್ದು, ದರ್ಗಾದ ಆವರಣ, ಹಿಂಭಾಗದ ಪ್ರದೇಶದಲ್ಲಿ ತಂಗಿದ್ದಾರೆ.

Advertisement

ಹಲವರು ಖಾಲಿ ಸ್ಥಳದಲ್ಲಿ ಒಲೆ ಹಚ್ಚಿ ಅಡುಗೆ ತಯಾರಿಸಿಕೊಂಡರೆ, ಮತ್ತೆ ಕೆಲವರು ತಾವು ಉಳಿದುಕೊಂಡಿರುವ ಸ್ಥಳದಲ್ಲೇ ಸಣ್ಣ ಗ್ಯಾಸ್‌ ಸಿಲಿಂಡರ್‌ ಇಟ್ಟು ಅಡುಗೆ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಖಾಜಾ ಬಂದೇ ನವಾಜ್‌ ದರ್ಗಾ ಮುಖ್ಯಸ್ಥ ಡಾ| ಸೈಯದ್‌ ಶಹಾ ಖುಸ್ರೋ ಹುಸೇನಿ ನೇತೃತ್ವದಲ್ಲಿ ನಡೆದ ಸಂದಲ್ (ಗಂಧ) ಮೆರವಣಿಗೆಯಲ್ಲಿ ಸೈಯದ್‌ ಮೊಹಮ್ಮದ್‌ ಅಲಿ-ಅಲ್ ಹುಸೇನಿ, ಡಾ| ಸೈಯದ್‌ ಮುಸ್ತಾಫಾ ಹುಸೇನಿ, ಸೈಯದ್‌ ಶಹಾ ಯೂಸಫ್‌ ಹುಸೇನಿ, ಸೈಯದ್‌ ಶಹಾ ಆರೀಫ್‌ ಹುಸೇನಿ, ಸೈಯದ್‌ ಅಹ್ಮದ ಹುಸೇನಿ, ಸೈಯದ್‌ ಶಹಾ ತಕ್ವಿಯುಲ್ಲಾ ಹುಸೇನಿ ಹಾಗೂ ಇತರ ರಾಜ್ಯಗಳ ದರ್ಗಾಗಳು ಮುಖ್ಯಸ್ಥರು ಪಾಲ್ಗೊಂಡಿದ್ದರು.

ಖರೀದಿ ಜೋರು: ಜು.18ರಂದು ಖಾಜಾ ಬಜಾರ್‌ನಲ್ಲಿ ಅಖೀಲ ಭಾರತ ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ ನಡೆದಿದೆ. ತಿಂಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಕರಕುಶಲ, ಗೃಹೋಪಯೋಗಿ ವಸ್ತುಗಳ ಮಾರಾಟಗಾರರು ಭಾಗವಹಿಸುವರು. ದೇಶದ ವಿವಿಧ ಪ್ರದೇಶದ ವಸ್ತುಗಳು ಒಂದೇ ಕಡೆ ಸಿಗುವುದರಿಂದ ಖರೀದಿಗೆ ಹೆಚ್ಚಿನ ಜನರು ಇಲ್ಲಿ ಬರುತ್ತಾರೆ. ಇದರ ಜೊತೆಗೆ ದರ್ಗಾ ಮೈದಾನದಲ್ಲಿ ಜೋಕಾಲಿ, ಆಟದ ಸಾಮಗ್ರಿ ಅಂಗಡಿಗಳು, ತಿಂಡಿ ತಿನಿಸುಗಳು ಸೇರಿದಂತೆ ಅನೇಕ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಮಕ್ಕಳು, ಕುಟುಂಬ ಸಮೇತ ಬಂದು ಖರೀದಿ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next