Advertisement

23-24ರಂದು ಅನುಭವ ಮಂಟಪ ಉತ್ಸವ: ಪಟ್ಟದೇವರು

11:28 AM Nov 20, 2019 | Naveen |

ಕಲಬುರಗಿ: ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಬಸವ ಧರ್ಮ ಟ್ರಸ್ಟ್‌ ವತಿಯಿಂದ ನ.23 ಮತ್ತು 24ರಂದು 40ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ನಡೆಯಲಿದೆ ಎಂದು ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಜ್ಯೋತಿ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಅನುಭವ ಮಂಟಪ ಉತ್ಸವವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಅಭಿಲಾಷೆ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಪ್ರಯತ್ನಗಳು ಸಾಗುತ್ತಿವೆ. ಈ ಬಾರಿಯ ಉತ್ಸವದಲ್ಲಿ ಚರ್ಚೆ, ಭಾಷಣಕ್ಕಿಂತ ಹೆಚ್ಚಾಗಿ ಸಂಗೀತಕ್ಕೆ ಆದ್ಯತೆ ನೀಡಲಾಗಿದೆ ಎಂದರು.

23ರಂದು ಬೆಳಗ್ಗೆ 11 ಗಂಟೆಗೆ ಅನುಭವ ಮಂಟಪ ಉತ್ಸವಕ್ಕೆ ಚಾಲನೆ ಸಿಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಉತ್ಸವ ಉದ್ಘಾಟಿಸಲಿದ್ದಾರೆ. ಬೆಂಗಳೂರು ಬೇಲಿಮಠ ಸಂಸ್ಥಾನದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ, ಹಾರಕೂಡ ಹಿರೇಮಠ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸುವರು. ಹಿರಿಯ ಸಾಹಿತಿ ಗೊ.ರು. ಚನ್ನಬಸವಪ್ಪ ಅನುಭಾವ ನೀಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಇದೇ ವೇಳೆ ಮನಗಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಅವರಿಗೆ ಡಾ| ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ, ಪ್ರಭು ಚವ್ಹಾಣ, ಸಂಸದರಾದ ಭಗವಂತ ಖೂಬಾ, ಡಾ| ಉಮೇಶ ಜಾಧವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ ಮತ್ತು ಕಲಬುರಗಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. 770 ವಿದ್ಯಾರ್ಥಿಗಳಿಂದ ವಚನ, ಗೀತ ಗಾಯನ ಹಾಗೂ ನೂಪುರ ನೃತ್ಯ ಅಕಾಡೆಮಿ ತಂಡದವರಿಂದ ವಚನ ನೃತ್ಯ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ವಚನ ಸಂಗೀತೋತ್ಸವ ನಡೆಯಲಿದ್ದು, ವಿಶ್ರಾಂತ ಕುಲಪತಿ ಡಾ| ಹನುಮಣ್ಣ ನಾಯಕ ದೊರೆ, ಡಾ| ಮೃತ್ಯುಂಜಯ ಶೆಟ್ಟರ, ಡಾ| ಕೃಷ್ಣಮೂರ್ತಿ ಭಟ್‌, ನವಲಿಂಗ ಪಾಟೀಲ, ಶಿವಾನಿ ಶಿವದಾಸ ಸ್ವಾಮಿ ಪಾಲ್ಗೊಳ್ಳುವರು ಎಂದರು.

ನಾಟಕ ಪ್ರದರ್ಶನ: ಪರಂಪರೆ ಮತ್ತು ಬೆಳವಣಿಗೆ ಕುರಿತು ಗೋಷ್ಠಿ ನಡೆಯಲಿದೆ. ರಾಮದುರ್ಗದ ಸಿದ್ದಣ್ಣ ಲಂಗೋಟಿ ಅನುಭಾವ ನೀಡಲಿದ್ದಾರೆ. ನಂತರದಲ್ಲಿ ಸಂಜೆ 7ಗಂಟೆಗೆ ಗುರು ಚನ್ನಬಸವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ವೇದಿಕೆ ಮಕ್ಕಳು ಅಭಿನಯಿಸಿದ “ಮಹಾಕ್ರಾಂತಿ ನಾಟಕ ಪ್ರದರ್ಶನ’ ಜರುಗಲಿದೆ ಎಂದು ವಿವರಿಸಿದರು.

Advertisement

ಇಷ್ಟಲಿಂಗ ಪೂಜೆ: 24ರಂದು ಬೆಳಗ್ಗೆ 7:30ಕ್ಕೆ ಅನುಭವ ಮಂಟಪ ಅಧ್ಯಕ್ಷ ಡಾ|
ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9:30ಕ್ಕೆ ವಚನ ಸಂಗೀತ ಸುಧೆ, ಶರಣರ ಸ್ವರವಚನ ಸಾಹಿತ್ಯ ಕುರಿತ ಗೋಷ್ಠಿ-2 ನಡೆಯಲಿದೆ. ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ಡಾ| ಮುದ್ದುಮೋಹನ, ವಿಶ್ವರಾಜ ರಾಜಗುರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಇದೇ ವೇಳೆ ರಾಜ್ಯಮಟ್ಟದ ಬಸವಣ್ಣನವರ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದ ಬಸಮ್ಮ (ಪ್ರಥಮ), ಮಹಾಲಕ್ಷ್ಮೀ (ದ್ವಿತೀಯ), ಚನ್ನಬಸಣ್ಣ (ತೃತೀಯ) ಅವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದರು.

ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಭಾಲ್ಕಿಯ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next