ಕಲಬುರಗಿ: ಡಾ| ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಿಂದ ಮನುಕುಲ ಸಮೃದ್ಧಿಯಾಗಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ ಹೇಳಿದರು.
ನ್ಯೂ ರಾಘವೇಂದ್ರ ಕಾಲೋನಿಯಲ್ಲಿರುವ ವಿವೇಕಾನಂದ ಕೋಚಿಂಗ್ ಸೆಂಟರ್‌ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ‘ಡಾ| ಅಂಬೇಡ್ಕರ್‌ರ
128ನೇ ಜಯಂತಿ’ ಕಾರ್ಯಕ್ರಮದಲ್ಲಿ ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಾನವೀಯತೆ ಮೇರು ಶಿಖರವಾದ ಬಾಬಾಸಾಹೇಬರ ಮಾರ್ಗದಲ್ಲಿ ಸಾಗಿದರೆ ಸಮೃದ್ಧ, ಸದೃಢ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದರು.
ಸಂಸ್ಥೆ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಮೂಲ ಮಂತ್ರದೊಂದಿಗೆ ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದು ಅಂಬೇಡ್ಕರ್ ಎಂದರು.
ವಿದ್ಯಾರ್ಥಿನಿ ಸಂಗೀತಾ ತಳವಾರ, ಡಾ| ಅಂಬೇಡ್ಕರ್‌ರ ಜೀವನ, ಸಂದೇಶ ತಿಳಿಸುವ ಪದ್ಯ ಹಾಡಿದಳು. ಬಳಗದ ಸದಸ್ಯರಾದ ಬಸವರಾಜ ಪುರಾಣೆ, ಬಸವರಾಜ ದೇಸಾಯಿ, ಸಹ ಶಿಕ್ಷಕರಾದ ಇಂದಿರಾ ಕಿರಣಗಿ, ಭೀಮಾಶಂಕರ ಶೇರಿ, ಮಲ್ಲಿಕಾರ್ಜುನ ಗುಡಬಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.