Advertisement

ಎಚ್ ಕೆಆರ್ ಡಿಬಿ ಕಾಮಗಾರಿಗೆ ಗಡುವು

10:00 AM May 10, 2019 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2013-14ನೇ ಸಾಲಿನಿಂದ 2017-18ನೇ ಸಾಲಿನ ವರೆಗೆ ಅನುಮೋದನೆ ನೀಡಿರುವ ಎಲ್ಲ ಕಾಮಗಾರಿಗಳನ್ನು ಬರುವ ಜೂನ್‌ ಅಂತ್ಯದವರೆಗೆ ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗಳಿಗೆ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಗಡುವು ನೀಡಿದ್ದಾರೆ.

Advertisement

ನಗರದ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಹೈ.ಕ. ಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಮಂಡಳಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ವಿವಿಧ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ನಿಧಾನಗತಿ ಪ್ರಗತಿ ಸಹಿಸುವುದಿಲ್ಲ. 2018-19ನೇ ಸಾಲಿನಲ್ಲಿ ಪ್ರಾಯೋಜನೆ ಮಾಡಿಕೊಂಡಿರುವ ಕಾಮಗಾರಿಗಳಲ್ಲಿ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಜೂನ್‌ ಅಂತ್ಯಕ್ಕೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡಳಿಯು ಪ್ರತಿ ಕಾಮಗಾರಿಗೆ ಪ್ರತ್ಯೇಕವಾಗಿ ಅನುದಾನವನ್ನು ಆಯಾ ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆ ಮಾಡಿದೆ. ಆದರೆ ಅನುಷ್ಠಾನ ಏಜೆನ್ಸಿಗಳು ಒಂದು ಕಾಮಗಾರಿಗೆ ಬಿಡುಗಡೆ ಮಾಡಿದ ಮೊತ್ತವನ್ನು ಇನ್ನೊಂದು ಕಾಮಗಾರಿಗಳಿಗೆ ಬಳಸುತ್ತಿರುವುದು ಮಂಡಳಿ ಗಮನಕ್ಕೆ ಬಂದಿದ್ದು, ಇದು ಸರಿಯಾದ ಕ್ರಮವಲ್ಲ. ಇಂತಹ ನಿಗದಿಪಡಿಸಿದ ಕಾಮಗಾರಿಗಳ ಬದಲಾಗಿ ಬೇರೊಂದು ಕಾಮಗಾರಿ ಮೊತ್ತ ಬಳಸುತ್ತಿರುವುದಕ್ಕೆ ಸೂಕ್ತ ಕಾರಣದೊಂದಿಗೆ ಪ್ರತಿ ಕಾಮಗಾರಿವಾರು ವರದಿಯನ್ನು ಮೇ 13ರೊಳಗೆ ಮಂಡಳಿಗೆ ಸಲ್ಲಿಸಬೇಕು. ಒಂದೇ ಹಂತದಲ್ಲಿ ಈ ಎಲ್ಲ ಕಾಮಗಾರಿಗಳ ಆರ್ಥಿಕ ಲೆಕ್ಕವನ್ನು ಕ್ರಮಬದ್ಧಗೊಳಿಸಲಾಗುವುದು. ಇನ್ನು ಮುಂದೆ ಆಯಾ ಕಾಮಗಾರಿಗಳಿಗೆ ಹಂಚಿಕೆ ಮಾಡಲಾದ ಅನುದಾನವನ್ನು ಅವುಗಳಿಗೆ ಮಾತ್ರ ಬಳಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಮಂಡಳಿಯ ಕಾಮಗಾರಿಗಳ ಆರ್ಥಿಕ ವೆಚ್ಚದ ಮಾಹಿತಿಯನ್ನು ಮಂಡಳಿ ಅಂತರ್ಜಾಲದಲ್ಲಿ ಅಪ್ಲೋಡ್‌ ಮಾಡಲು ಅವಕಾಶ ನೀಡಲಾಗಿತ್ತು. ಲೆಕ್ಕಕ್ಕೆ ಹೊಂದಾಣಿಕೆಯಾದಂತೆ ಅನುಷ್ಠಾನ ಏಜೆನ್ಸಿಗಳು ತಪ್ಪಾಗಿ ಮಾಹಿತಿ ಒದಗಿಸುತ್ತಿರುವುದರಿಂದ ಆರ್ಥಿಕ ವೆಚ್ಚದ ಮಾಹಿತಿಯನ್ನು ಅಪ್ಲೋಡ್‌ ಮಾಡುವ ವ್ಯವಸ್ಥೆ ತೆಗದುಹಾಕಲಾಗಿದೆ. ಇನ್ನು ಮುಂದೆ ಅನುಷ್ಠಾನ ಏಜೆನ್ಸಿಗಳು ಕೇವಲ ಭೌತಿಕ ಪ್ರಗತಿ ಮಾತ್ರ ಅಪ್ಲೋಡ್‌ ಮಾಡಬಹುದಾಗಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಅರಿಯಲು ಇತ್ತೀಚೆಗೆ ಮಂಡಳಿ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದ್ದು, ಮಂಡಳಿ ಸಿಬ್ಬಂದಿ ಒದಗಿಸಿರುವ ಮಾಹಿತಿ ಹಾಗೂ ಅನುಷ್ಠಾನ ಏಜೆನ್ಸಿಗಳು ನೀಡುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಅಂತರ್ಜಾಲದಲ್ಲಿ ಇದನ್ನು ಸರಿಪಡಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.

Advertisement

ಮಂಡಳಿ ಉಪ ಕಾರ್ಯದರ್ಶಿ ಡಾ| ಬಿ. ಸುಶೀಲಾ, ಅಧಿಧೀಕ್ಷಕ ಅಭಿಯಂತರ ತಿಪ್ಪೇಶ, ಜೈ.ಕ. ಭಾಗದ ಎಲ್ಲ ಜಿಲ್ಲೆಯ ಕೆ.ಆರ್‌.ಐ.ಡಿ.ಎಲ್. ನಿರ್ಮಿತಿ ಕೇಂದ್ರ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಬದ್ಧತೆಯಿಂದ ಕಾರ್ಯನಿರ್ವಹಿಸಿ
ಹೈ.ಕ. ಭಾಗದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರ ಬದುಕು ಹಸನಗೊಳಿಸಲು ಸರ್ಕಾರ ಮಂಡಳಿಯಿಂದ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಸಣ್ಣ-ಪುಟ್ಟ ಸಮಸ್ಯೆಗಳಿಗೂ ಅಧಿಕಾರಿಗಳು ಮಂಡಳಿಯತ್ತ ಮುಖ ಮಾಡುವುದು ಸರಿಯಲ್ಲ. ಮಂಡಳಿ ಅನುದಾನ ಒದಗಿಸುತ್ತದೆಯೇ ಹೊರತು ಎಲ್ಲದಕ್ಕೂ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ಕಾಮಗಾರಿ ಅನುಷ್ಠಾನ ಸಂಬಂಧ ಸ್ಥಳೀಯವಾಗಿ ಸಮಸ್ಯೆಗಳು ತಲೆದೋರಿದಲ್ಲ್ಲಿ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಬಗೆಹರಿಸಿಕೊಂಡು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಹಣ ವ್ಯಯಕ್ಕೆ ಅರ್ಥ ಬರುತ್ತದೆ.
•ಸುಬೋಧ ಯಾದವ,
ಕಾರ್ಯದರ್ಶಿ, ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next