Advertisement

9 ವರ್ಷದಲ್ಲಿ 7,347 ಕೋಟಿ ಆದಾಯ

10:26 AM Jun 26, 2019 | Naveen |

ರಂಗಪ್ಪ ಗಧಾರ
ಕಲಬುರಗಿ:
ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಕಲಬುರಗಿ ರೈಲ್ವೆ ವಿಭಾಗ ಆರಂಭಿಸಬೇಕೆಂಬ ಕೂಗಿನ ನಡುವೆ ಕಳೆದ ಒಂಭತ್ತು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯೊಂದರಿಂದಲೇ ರೈಲ್ವೆ ಇಲಾಖೆಗೆ ಬರೋಬ್ಬರಿ 7,347 ಕೋಟಿ ರೂ. ಆದಾಯ ಸಂದಾಯವಾಗಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಆರ್‌ಟಿಐ ಕಾರ್ಯಕರ್ತ ಸುನೀಲ ಕುಲಕರ್ಣಿ ಎನ್ನುವರು ಪ್ರತಿ ವರ್ಷವೂ ಜಿಲ್ಲೆಯಿಂದ ರೈಲ್ವೆ ಇಲಾಖೆ ಗಳಿಸುತ್ತಿರುವ ಆದಾಯದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಸ್ತಕ ವರ್ಷ ಸಲ್ಲಿಕೆಯಾದ ಆರ್‌ಟಿಐ ಅರ್ಜಿಯಿಂದ ಕಳೆದ 2018-19ನೇ ಆರ್ಥಿಕ ಸಾಲಿನಲ್ಲಿ ರೈಲ್ವೆ ಇಲಾಖೆಗೆ 794 ಕೋಟಿ ರೂ. ಆದಾಯ ಸಂದಾಯವಾಗಿರುವುದು ಬಯಲಾಗಿದೆ. ಮೇ 21ರಂದು ಸುನೀಲ ಸಲ್ಲಿಸಿದ್ದ ಅರ್ಜಿಯನ್ನು ಜೂ.13ರಂದು ರೈಲ್ವೆ ಇಲಾಖೆ ವಿಲೇವಾರಿ ಮಾಡಿದೆ.

ಹೈ.ಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ನಾಲ್ಕು ರೈಲ್ವೆ ವಲಯಗಳಿಗೆ ಹಂಚಿ ಹೋಗಿವೆ. ಕಲಬುರಗಿ ಜಿಲ್ಲೆಯ ಪ್ರಮುಖ ಆದಾಯ ಕೇಂದ್ರಗಳಾದ ಕಲಬುರಗಿ, ವಾಡಿ ರೈಲ್ವೆ ನಿಲ್ದಾಣ ಮಧ್ಯ ರೈಲ್ವೆಯ ಸೊಲ್ಲಾಪುರ ವಿಭಾಗಕ್ಕೆ ಒಳಪಟ್ಟರೆ, ಚಿತ್ತಾಪುರ, ಸೇಡಂ ಹಾಗೂ ಮಳಖೇಡ್‌ ನಿಲ್ದಾಣ ದಕ್ಷಿಣ ಮಧ್ಯ ರೈಲ್ವೆಯ ಸಿಕ್ರಿಂದ್ರಾಬಾದ್‌ ವಿಭಾಗದ ವ್ಯಾಪ್ತಿಯಲ್ಲಿ ಬರುತ್ತವೆ.

ಅದೇ ರೀತಿ ಬೀದರ್‌ ಜಿಲ್ಲೆ ದಕ್ಷಿಣ ಮಧ್ಯ ರೈಲ್ವೆಯ ಸಿಕಿಂದ್ರಾಬಾದ್‌ ವಿಭಾಗಕ್ಕೆ ರಾಯಚೂರು, ಯಾದಗಿರಿ ಜಿಲ್ಲೆಗಳು ದಕ್ಷಿಣ ಕರಾವಳಿ ರೈಲ್ವೆಯ ಗುಂತಕಲ್ ವಿಭಾಗಕ್ಕೆ ಹಾಗೂ ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಒಳಪಟ್ಟಿವೆ. ಹೀಗೆ ಒಂದೊಂದು ವಲಯಕ್ಕೆ ಹಂಚಿ ಹೋಗಿರುವ ಹೈ.ಕ ಜಿಲ್ಲೆಗಳನ್ನು ಒಂದುಗೂಡಿಸಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ.

ವರ್ಷಕ್ಕೆ 1,500 ಕೋಟಿ ಆದಾಯ: ಹೈ.ಕ ಭಾಗದ ಆರು ಜಿಲ್ಲೆಗಳಿಂದ ಒಟ್ಟಾರೆ 1,500 ಕೋಟಿ ರೂ.ಗಳಿಗೂ ಅಧಿಕ ಆದಾಯವನ್ನು ರೈಲ್ವೆ ಇಲಾಖೆ ಗಳಿಸುತ್ತಿದೆ. ಅದರಲ್ಲೂ ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಮತ್ತು ಸಿಮೆಂಟ್ ಕಾರ್ಖಾನೆಗಳು ಇರುವುದಿಂದ ಈ ಎರಡು ಜಿಲ್ಲೆಗಳಿಂದ ರೈಲ್ವೆಗೆ ಹೆಚ್ಚು ಆದಾಯ ಸಂದಾಯವಾಗುತ್ತದೆ ಎಂಬ ಅಂದಾಜಿದೆ. ಕಲಬುರಗಿ ಜಿಲ್ಲೆಯೊಂದರಿಂದಲೇ ಪ್ರಯಾಣಿಕರ ಟಿಕೆಟ್, ಸರಕು ಸಾಗಣೆ ಹಾಗೂ ಮತ್ತಿತರ ಮೂಲಗಳಿಂದ ಪ್ರತಿ ವರ್ಷ ಕನಿಷ್ಟ 600 ಕೋಟಿ ರೂ. ಆದಾಯವನ್ನು ಸೊಲ್ಲಾಪುರ ಹಾಗೂ ಸಿಕಿಂದ್ರಾಬಾದ್‌ ವಿಭಾಗದ ಜೇಬು ಸೇರುತ್ತದೆ. 2014-15 ಮತ್ತು 2015-16ನೇ ಸಾಲಿನಲ್ಲಿ ಕ್ರಮವಾಗಿ ಅತ್ಯಧಿಕ 936 ಕೋಟಿ ರೂ. ಮತ್ತು 923 ಕೋಟಿ ರೂ.ಗಳ ಆದಾಯ ಸಂಗ್ರಹವಾಗಿದೆ.

Advertisement

ಯಾವ ನಿಲ್ದಾಣ?-ಎಷ್ಟು ಆದಾಯ?: ಸುನೀಲ ಕುಲಕರ್ಣಿ ಅವರು ಸೊಲ್ಲಾಪುರ ಹಾಗೂ ಸಿಕಿಂದ್ರಾಬಾದ್‌ ವಿಭಾಗಕ್ಕೆ ಪ್ರತ್ಯೇಕ ಆರ್‌ಟಿಐ ಅರ್ಜಿ ಸಲ್ಲಿಸಿ ಆಯಾ ವ್ಯಾಪ್ತಿಯ ರೈಲ್ವೆ ಆದಾಯದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 2018-19ನೇ ಆರ್ಥಿಕ ಸಾಲಿನಲ್ಲಿ ಕಲಬುರಗಿ 72 ಕೋಟಿ ರೂ., ವಾಡಿ 16 ಕೋಟಿ ರೂ., ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ 283 ಕೋಟಿ ರೂ., ಶಹಾಬಾದ 4.1 ಕೋಟಿ ರೂ., ಸೇಡಂ 115 ಕೋಟಿ ರೂ., ಚಿತ್ತಾಪುರ 11 ಕೋಟಿ ರೂ., ಮಳಖೇಡ್‌ (ರಾಜಶ್ರೀ ಸಿಮೆಂಟ್ ಕಾರ್ಖಾನೆ ಸೇರಿ) 282 ಕೋಟಿ ರೂ. ಹಾಗೂ ಚೆಟ್ಟಿನಾಡ್‌ ಸಿಮೆಂಟ್ ಪ್ಲಾಂಟ್ನಿಂದ ರೈಲ್ವೆ ಇಲಾಖೆಗೆ 10 ಕೋಟಿ ರೂ. ಆದಾಯ ಸಂದಾಯವಾಗಿದೆ.

ರೈಲ್ವೆ ವಿಭಾಗಕ್ಕೆ 90 ಕೋಟಿ ರೂ. ಸಾಕು
ಹೈ.ಕ ಭಾಗದಿಂದ ರೈಲ್ವೆ ಇಲಾಖೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತದೆ. ಇದರಲ್ಲಿ ಕೇವಲ 90 ಕೋಟಿ ರೂ. ನಿಯೋಜನೆ ಮಾಡಿದರೆ ಪ್ರತ್ಯೇಕವಾದ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಮಾಡಬಹುದಾಗಿದೆ. ಇದರಿಂದ ನಾಲ್ಕು ಬೇರೆ-ಬೇರೆ ವಿಭಾಗಗಳಿಗೆ ಹಂಚಿ ಹೋಗಿರುವ ಹೈ.ಕದ ಆರು ಜಿಲ್ಲೆಗಳು ಒಂದೇ ವಿಭಾಗಕ್ಕೆ ಸೇರುತ್ತವೆ. ಆದಾಯ ಕ್ರೂಢೀಕರಣವಾಗಿ ಆರ್ಥಿಕ ಬೆಳವಣಿಗೆ ಕಾಣಬಹುದು. ಜತೆಗೆ ಹೊಸ ವಿಭಾಗದಿಂದಾಗಿ ಉದೋಗ್ಯ ಸೃಷ್ಟಿಯಾಗುತ್ತದೆ.
ಸುನೀಲ ಕುಲಕರ್ಣಿ,
ಆರ್‌ಟಿಐ ಕಾರ್ಯಕರ್ತ
ಸಂಸದರ ಮೇಲಿದೆ ಹೊಣೆ
ಕಳೆದ 30 ವರ್ಷಗಳಿಂದ ಹೈ.ಕ ಪ್ರದೇಶದ ಆರು ಜಿಲ್ಲೆಯನ್ನೊಳಗೊಂಡ ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆ ಮಾಡಬೇಕೆಂಬ ಒತ್ತಾಯವಿದೆ. ಸ್ಥಳೀಯ ನಾಯಕರ ಇಚ್ಛಾಶಕ್ತಿ ಕೊರತೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ‘ಕ್ರೆಡಿಟ್’ ತಂತ್ರದಿಂದಾಗಿ 2013ರ ವರೆಗೆ ಈ ವಿಷಯ ಎಳೆದುಕೊಂಡು ಬಂದಿತ್ತು. ಕೊನೆಗೆ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ 2013ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಿಭಾಗ ಘೋಷಿಸಿದ್ದರು. 2014ರಲ್ಲಿ ಸ್ಥಳ ಗುರುತಿಸಿ ಶಂಕುಸ್ಥಾಪನೆ ಮಾಡಿದ್ದರು. ತದನಂತರ ಕೇಂದ್ರದಲ್ಲಿ ಸರ್ಕಾರ ಬದಲಾದ ಪರಿಣಾಮ ನನೆಗುದಿಗೆ ಬಿದ್ದಿದೆ. ಹೈ.ಕ ವ್ಯಾಪ್ತಿಯ ಐದು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರೇ ಇರುವುದರಿಂದ ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಆರಂಭಿಸುವ ಹೊಣೆ ಇವರ ಮೇಲಿದೆ.
ಲಕ್ಷ್ಮಣ ದಸ್ತಿ,
ಅಧ್ಯಕ್ಷರು, ಜನಪರ ಹೋರಾಟ ಸಮಿತಿ
Advertisement

Udayavani is now on Telegram. Click here to join our channel and stay updated with the latest news.

Next