ಕಲಬುರಗಿ: ಭ್ರಷ್ಟಾಚಾರ ಕ್ಯಾನ್ಸರ್‌ಗಿಂತ ಭಯಾನಕವಾಗಿದ್ದು, ದೇಶದ ಪ್ರಗತಿಗೆ ಅಡ್ಡಿಯಾಗಿದೆ. ಇದನ್ನು ಬೇರು ಸಮೇತ ಕಿತ್ತೂಗೆಯಲು ಎಲ್ಲರೂ ಪಣ ತೊಡಬೇಕು ಎಂದು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.
ಉಚ್ಛ ನ್ಯಾಯಾಲಯದಲ್ಲಿ 70ನೇ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಧಿಕಾರ ವ್ಯಾಮೋಹ, ಸ್ವಹಿತಾಸಕ್ತಿ, ಸೃಜನ ಪಕ್ಷಪಾತ, ಹಣದ ದಾಹ, ಭ್ರಷ್ಟಾಚಾರ ಸಮಾಜದಲ್ಲಿ ಹೆಚ್ಚಾಗಿ ರಾಷ್ಟ್ರಪ್ರೇಮ ಆತಂಕದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನಾಚರಣೆಗಳು ದೇಶದ ಎರಡು ರಾಷ್ಟ್ರೀಯ ಹಬ್ಬಗಳು. ದಿನಾಚರಣೆಗೆ ಮಾತ್ರ ರಾಷ್ಟ್ರಪ್ರೇಮ ಸೀಮಿತವಾಗದೆ ಪ್ರತಿದಿನ ನಮ್ಮ ರಕ್ತದಲ್ಲಿ ರಾಷ್ಟ್ರಪ್ರೇಮ ಅಡಗಿರಬೇಕು. ಅನ್ಯಾಯ, ಅತ್ಯಾಚಾರ ಕಂಡಾಗ ಅದರ ವಿರುದ್ಧ ಸಿಡಿದೇಳಬೇಕು ಎಂದರು.
ದೇಶದ ರಕ್ಷಣೆ ಕೇವಲ ಸೈನಿಕರ ಕೆಲಸವಲ್ಲ, ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ತನ್ನ ಕೆಲಸದಲ್ಲಿ ಕಾಯಾ, ವಾಚಾ, ಮನಸಾ, ಶ್ರದ್ಧೆಯಿಂದ ದೇಶದ ಪ್ರಗತಿಗೆ ದುಡಿದಾಗ ಮಾತ್ರ ಸ್ವರಾಜ್ಯದ ಮೂಲ ಆಶಯ ಸಾರ್ಥಕವಾಗುತ್ತದೆ ಹಾಗೂ ಸ್ವಾತಂತ್ರ ದೊರಕಿಸಿಕೊಟ್ಟ ಅಸಂಖ್ಯಾತ ಸ್ವಾತಂತ್ರ ಸೇನಾನಿಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವದ ಪರಿ ಇದಾಗುತ್ತದೆ ಎಂದರು.
ಕಾಸಿಗಾಗಿ ಮತ ಮಾರಿಕೊಳ್ಳಬೇಡಿ: ಪ್ರತಿ ಐದು ವರ್ಷಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಚುನಾಯಿಸುವ ಮೂಲಕ ದೇಶದ ಪ್ರಗತಿಗೆ ಸಹಕರಿಸಿ. ಎಂಜಲು ಕಾಸಿಗೆ ಕೈ ಒಡ್ಡಿ ಮತ ಮಾರಿಕೊಂಡು ನಂತರ ಪಶ್ಚಾತಾಪ ಪಡಬೇಡಿ ಎಂದು ಸಲಹೆ ನೀಡಿದರು. ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜಿ. ಪಂಡಿತ, ನ್ಯಾಯಮೂರ್ತಿ ಪಿ.ಜೆ.ಎಂ. ಪಾಟೀಲ, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ.ಅಸೋದೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಟಿ. ಕಟ್ಟಿಮನಿ ಹಾಗೂ ವಿವಿಧ ಶ್ರೇಣಿಯ ನ್ಯಾಯಾಧಿಧೀಶರು, ನ್ಯಾಯವಾದಿಗಳು, ಬಾರ್ ಕೌನ್ಸಿಲ್ ಸದಸ್ಯರು, ಉಚ್ಚ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.
ಉಚ್ಛ ನ್ಯಾಯಾಲಯ ನ್ಯಾಯಾವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಜಿ. ಮಠ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಗೋಪಾಲ ಯಾದವ ವಂದಿಸಿದರು. ಕಾರ್ಯಕ್ರಮದಲ್ಲಿ ‘ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು’ ಹಾಗೂ ‘ಏ ಮೇರೆ ವತನ್ ಕೆ ಲೋಗೊ’ ದೇಶಭಕ್ತಿ ಗೀತೆಗಳು ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.