ಕಲಬುರಗಿ: ಮಳೆ ಕೊರತೆ ಮತ್ತು ನಿರಂತರ ರಣ ಬಿಸಿಲು ವಾತಾವರಣವಿರುವ ಜಿಲ್ಲೆಯಲ್ಲಿ ಪ್ರತಿ ವರ್ಷವೂ ನೀರಿನ ಅಭಾವ ತಲೆದೋರುತ್ತಲೇ ಇದೆ. ಬೇಸಿಗೆಯಲ್ಲಿ ನೀರು ಪೂರೈಸಲು ಆಡಳಿತ ಯಂತ್ರ ಅನೇಕ ರೀತಿಯಲ್ಲಿ ತಾಪತ್ರಯ ಪಡುತ್ತಿದೆ. ಹೀಗಾಗಿ ಮುಂದಿನ ಬೇಸಿಗೆ ಸವಾಲು ಎದುರಿಸಲು ಮಹಾನಗರ ಪಾಲಿಕೆ ಈಗಲೇ ಸನ್ನದ್ಧವಾಗುತ್ತಿದ್ದು, ನಗರದಲ್ಲಿರುವ ಐತಿಹಾಸಿಕ, ಪುರಾತನ ಬಾವಿಗಳನ್ನು ಪುನರುಜ್ಜೀವನಗೊಳಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆ.
Advertisement
ಜಿಲ್ಲೆಯನ್ನು ಸತತ ಮೂರು ವರ್ಷಗಳಿಂದ ಬರಗಾಲ ಕಾಡುತ್ತಿದೆ. ಅದರಲ್ಲೂ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದಿಂದ ಸಾರ್ವಜನಿಕರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ಮಹಾನಗರದ ನಾಗರಿಕರು ನೀರಿಗಾಗಿ ಅನೇಕ ರೀತಿಯಲ್ಲಿ ಪಡಿಪಾಟಲು ಪಡುತ್ತಿದ್ದಾರೆ. ಜನರಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಬೆವರು ಸುರಿಸುತ್ತಿದ್ದಾರೆ.
Related Articles
Advertisement
ಈಗಾಗಲೇ ಹೀರಾಪುರ ಬಡಾವಣೆಯ ಶಂಕಲಿಂಗ ಬಾವಿ ಸೇರಿದಂತೆ ಮೂರು ಬಾವಿಗಳನ್ನು ಪಾಲಿಕೆ ನೌಕರರು ಸ್ವಚ್ಛಗೊಳಿಸಿದ್ದಾರೆ. ಬಾವಿಗಳಲ್ಲಿ ಸಂಗ್ರಹವಾಗಿದ್ದ ಅಶುದ್ಧ ನೀರು, ಬೇಕಾಬಿಟ್ಟಿ ಎಸೆದ ಕಸದ ರಾಶಿ, ಬಾವಿಯಲ್ಲಿ ತುಂಬಿದ್ದ ಹೂಳನ್ನು ಯಂತ್ರೋಪಕರಣ ಬಳಸಿ ಹೊರ ತೆಗೆಯಲಾಗಿದೆ. ನೀರಿನ ಝರಿ ಬಂಡೆಗಳ ಸಂದಿಯಿಂದ ಕೆಲವೆಡೆ ಚಿಮ್ಮಿದರೆ, ಮತ್ತೆ ಕೆಲವೆಡೆ ನೀರು ಬಸಿಯುತ್ತಿರುವುದು, ಸುತ್ತ-ಮುತ್ತಲಿನ ನಿವಾಸಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.
ಬಳಕೆಯಲ್ಲಿ 15 ಬಾವಿಗಳು: ಪಾಲಿಕೆಯವರು ಗುರುತಿಸಿರುವ 64 ಬಾವಿಗಳ ಪೈಕಿ 15 ಬಾವಿಗಳಲ್ಲಿ ನೀರು ಇದ್ದು, ದಿನವೂ ಬಳಕೆಯಾಗುತ್ತಿದೆ. ಇದರಲ್ಲಿ ಹೀರಾಪುರದಲ್ಲೇ ಐತಿಹಾಸಿಕ 12 ಬಾವಿಗಳಿದ್ದು, ಐದು ಬಾವಿಗಳು ಉಪಯೋಗದಲ್ಲಿವೆ. ಜತೆಗೆ ರಾಜಪೂರ, ಗುಬ್ಬಿ ಕಾಲೋನಿ, ತಾರ್‌ಫೈಲ್, ದತ್ತ ನಗರ, ನಯಾ ಮೊಹಲ್ಲಾ ಮತ್ತು ಕೋರಂಟಿ ಹನುಮಾನ ಮಂದಿರ ಎದುರುಗಡೆ ಇರುವ ಬಾವಿಗಳಲ್ಲಿ ಜೀವ ಜಲವಿದೆ. ಈ ಬಾವಿಗಳಲ್ಲೂ ಹೂಳೆತ್ತುವ ಕಾರ್ಯ ಮಾಡಿ ಸಂರಕ್ಷಿಸಲು ನಿರ್ಧರಿಸಲಾಗಿದೆ.
4 ಕೋಟಿ ರೂ. ವೆಚ್ಚ: ಮಹಾನಗರ ಪಾಲಿಕೆ ಗುರುತಿಸಿರುವ ಎಲ್ಲ 64 ಬಾವಿಗಳ ಸ್ವಚ್ಛತೆಗೆ 4 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕಸದ ತ್ಯಾಜ್ಯ ಮತ್ತು ಹೂಳೆತ್ತುವ ಯಂತ್ರೋಪಕರಣಗಳಿಗಾಗಿ ಅನುದಾನ ಬೇಕಾಗುತ್ತದೆ. ಹೀಗಾಗಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲು ಪಾಲಿಕೆ ತೀರ್ಮಾನಿಸಿದೆ. ಈಗಾಗಲೇ ಪಾಲಿಕೆಯು ಸ್ವಚ್ಛಗೊಳಿಸಿದ ಬಾವಿಗಳಲ್ಲಿ ನೀರು ಸಂಗ್ರಹವಾಗಿದೆ. ಸರ್ಕಾರದಿಂದ ಅನುದಾನ ಬಂದು ಎಲ್ಲ ಬಾವಿಗಳು ಶುದ್ಧಗೊಂಡರೆ ನೀರಿನ ಕೊರತೆ ನೀಗುವ ವಿಶ್ವಾಸವನ್ನು ಪಾಲಿಕೆ ಅಧಿಕಾರಿಗಳು ಹೊಂದಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಡಿಮೆ ಮಾಡಲು 64 ಬಾವಿಗಳನ್ನು ಗುರುತಿಸಿ ಪುನರುಜ್ಜೀವನಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಎಲ್ಲ ಬಾವಿಗಳ ಸ್ವಚ್ಛತೆಗೆ ಅಂದಾಜು 4 ಕೋಟಿ ರೂ. ವೆಚ್ಚವಾಗಲಿದೆ. ಆದರೆ, ಇದು ಮಹಾನಗರ ಪಾಲಿಕೆಗೆ ದೊಡ್ಡ ಮೊತ್ತವಾಗಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.•ಬಿ. ಫೌಜಿಯಾ ತರನ್ನುಮ್,
ಆಯಕ್ತರು, ಮಹಾನಗರ ಪಾಲಿಕೆ, ಕಲಬುರಗಿ 20 ವರ್ಷಗಳ ಹಿಂದೆ ಶಂಕಲಿಂಗ ಬಾವಿ ತುಂಬಾ ನೀರಿತ್ತು. ಬಾವಿಯಲ್ಲಿ ಸುಮಾರು 70 ಮೆಟ್ಟಿಲುಗಳಿದ್ದು, ಬರೀ ನಾಲ್ಕು ಮೆಟ್ಟಿಲು ಇಳಿದರೆ ನೀರು ಸಿಗುತ್ತಿತ್ತು. ಇದೇ ಬಾವಿ ನೀರನ್ನು ಸ್ನಾನ ಮಾಡಲು, ಬಟ್ಟೆ ತೊಳೆಯಲು ಬಳಸುತ್ತಿದ್ದೆವು. ಆಗ ನೀರಿಗಾಗಿ ಬಾವಿ ಸುತ್ತ ಜನ ಸೇರುತ್ತಿದ್ದೆವು. ನಾನು ಇದೇ ಬಾವಿ ನೀರು ಬಳಸಿ ಮನೆ ಕಟ್ಟಿದ್ದೇನೆ. ಮನೆ ಬಾಗಿಲಿಗೆ ನಳದ ನೀರು ಬಂದ ಬಳಿಕ ಬಾವಿ ನೀರು ಯಾರೂ ಬಳಸುತ್ತಿಲ್ಲ. ಈಗ ಪಾಲಿಕೆಯವರು ಬಾವಿ ಸ್ವಚ್ಛಗೊಳಿಸಿ ಒಳ್ಳೆ ಕೆಲಸ ಮಾಡಿದ್ದಾರೆ.
•ಗುಂಡಮ್ಮ ಹೊಸಮನಿ,
ಹಿರಿಯ ನಿವಾಸಿ, ಹೀರಾಪುರ