Advertisement

ಒಂದೇ ದಿನ 100 ಸೋಂಕಿತರು ಡಿಸ್ಚಾರ್ಜ್‌

12:05 PM Jun 18, 2020 | Naveen |

ಕಲಬುರಗಿ: ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಮಧ್ಯೆಯೂ ಬುಧವಾರ ಒಂದೇ ದಿನ ಬರೋಬ್ಬರಿ 100 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ ಹೊಸದಾಗಿ 9 ಮಕ್ಕಳು ಸೇರಿ ಮತ್ತೆ 19 ಜನರಿಗೆ ಮಹಾಮಾರಿ ಸೋಂಕು ದೃಢಪಟ್ಟಿದೆ.

Advertisement

ಗುಜರಾತ್‌ ಪ್ರವಾಸ ಹಿನ್ನೆಲೆಯ ಕುರುಣೇಶ್ವರ ನಗರದ ಏಳು ವರ್ಷದ ಬಾಲಕ (ಪಿ-7691) ಮತ್ತು ಮಿಸ್ಬಾ ನಗರದ 9 ವರ್ಷದ ಬಾಲಕ (ಪಿ-7679) ಹಾಗೂ ಉಳಿದಂತೆ ಮಹಾರಾಷ್ಟ್ರದಿಂದ ಆಗಮಿಸಿದ 17 ಜನರಿಗೆ ಸೋಂಕು ಪತ್ತೆಯಾಗಿದೆ. ಆದರೆ, ಮಿಸ್ಬಾ ನಗರದ ಬಾಲಕನಿಗೆ ಯಾರಿಂದ? ಹೇಗೆ? ಸೋಂಕು ತಗುಲಿದೆ ಎಂಬುವುದು ಗೊತ್ತಾಗಿಲ್ಲ. ಕಲಬುರಗಿ ತಾಲೂಕಿನ ಹಿರೇಸಾವಳಗಿ ಗ್ರಾಮದ 48 ವರ್ಷದ ಮಹಿಳೆ, ಹಾರುತಿ ಹಡಗಲ್‌ ಗ್ರಾಮದ 2 ವರ್ಷದ ಗಂಡು ಮಗು, ಕಲ್ಲಹಂಗರಗಾ ಗ್ರಾಮದ ನಾಲ್ಕು ವರ್ಷದ ಗಂಡು ಮಗು, 13 ವರ್ಷದ ಬಾಲಕಿ, 23 ವರ್ಷದ ಮಹಿಳೆ ಹಾಗೂ ಇಟಗಾ ಕೆ. ತಾಂಡಾದ 9 ವರ್ಷದ ಬಾಲಕಿಗೆ ಸೋಂಕು ಕಾಣಿಸಿಕೊಂಡಿದೆ.

ಚಿತ್ತಾಪುರದ ತಾಲೂಕಿನ ವಾಡಿ ಪಟ್ಟಣದ 41 ವರ್ಷದ ಮಹಿಳೆ, ಇಂದಿರಾ ನಗರದ 2 ವರ್ಷದ ಗಂಡು ಮಗು, ಸೂಗುರ ಗ್ರಾಮದ 65 ವರ್ಷದ ವೃದ್ಧ, ನಾಲವಾರ ತಾಂಡಾದ 45 ವರ್ಷದ ಮಹಿಳೆ ಹಾಗೂ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದ ಮೂರು ಮತ್ತು ನಾಲ್ಕು ವರ್ಷದ ಬಾಲಕರು ಮತ್ತು 32 ವರ್ಷದ ಮಹಿಳೆ, ಕಮಲಾಪುರದಲ್ಲಿ ಇಬ್ಬರು ಹಾಗೂ ಚಿಂಚೋಳಿ ತಾಲೂಕಿನಲ್ಲಿ ಒಬ್ಬರಿಗೆ ಕೋವಿಡ್ ಅಂಟಿಕೊಂಡಿದೆ.

ಕೋವಿಡ್ ಗೆದ್ದ 99ರ ಅಜ್ಜಿ!
ಕಮಲಾಪುರ ತಾಲೂಕಿನ ಬುಗಡಿ ತಾಂಡಾದ 99 ವರ್ಷದ ಅಜ್ಜಿ ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಈ ಅಜ್ಜಿ (ಪಿ-4901)ಗೆ ಜೂ.6ರಂದು ಸೋಂಕು ದೃಢಪಟ್ಟಿತ್ತು. ಸೋಂಕಿನಿಂದ ಗುಣವಾದ ಹಿನ್ನೆಲೆಯಲ್ಲಿ ಬುಧವಾರ ಹಿರಿಯ ಜೀವ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next