Advertisement

ನೀರಿನ ಸಮಸ್ಯೆಗಿದೆ ಪರಿಹಾರ

12:33 PM Dec 09, 2019 | Naveen |

ಕಲಬುರಗಿ: ವಿಶ್ವ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಭಾರತ ಪರಿಹಾರ ಮಾರ್ಗ ಹೊಂದಿದೆಯಲ್ಲದೇ, ನೀರಿಗಾಗಿ ರಾಷ್ಟ್ರಗಳ ಮಧ್ಯೆ ಮುಂಬರುವ ಮೂರನೇ ಮಹಾಯುದ್ಧವನ್ನು ತಪ್ಪಿಸುತ್ತದೆ ಎಂದು ರಾಜಸ್ಥಾನದ ಜಲ ತಜ್ಞ ಮತ್ತು ಪ್ರತಿಷ್ಠಿತ ವಿಶ್ವ ಜಲ ಪ್ರಶಸ್ತಿ ವಿಜೇತ ರಾಜೇಂದ್ರಸಿಂಗ್‌ ಹೇಳಿದರು.

Advertisement

ನಗರದ ಶರಣಬಸವ ಶತಮಾನೋತ್ಸವ ಭವನದಲ್ಲಿ ಶರಣಬಸವ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಗುಲ್ಬರ್ಗಾ ವಿಶ್ವವಿದ್ಯಾಲಯ, ಜಲ ಸಮಿತಿಗಳ ಒಕ್ಕೂಟ, ಜಲಜಾಗೃತಿ ಅಭಿಯಾನ ವೇದಿಕೆ, ಥ್ರೀಜೆ ಕ್ಲಬ್‌ ಆಳಂದ, ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಲ ಜಾಗೃತಿ ಸಮಾವೇಶದಲ್ಲಿ ಜಲ ಸಂರಕ್ಷಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ನೀರಿನ ಬಿಕ್ಕಟ್ಟು ಜಾಗತಿಕವಾಗಿದ್ದರೂ, ಪರಿಹಾರ ಮಾತ್ರ ಸ್ಥಳೀಯವಾಗಿದೆ. ನೀರನ್ನು ಗೌರವಿಸುವ ಮತ್ತು ಅನಾದಿ ಕಾಲದಿಂದ ಮರುಬಳಕೆ ಮಾಡುವ ತತ್ವವನ್ನು ಅನುಸರಿಸುವ ಅಂತರ್ಗತ ಸಂಸ್ಕೃತಿ ಹೊಂದಿರುವ ದೇಶ ಭಾರತವಾಗಿದೆ ಎಂದು ಹೇಳಿದರು.

ಇತ್ತೀಚೆಯ ದಿನಗಳಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ಈ ತತ್ವಗಳನ್ನು ಅಭ್ಯಾಸ ಮಾಡುವಲ್ಲಿ ಕೆಲವು ವಿರೂಪಗಳು ಕಂಡು ಬಂದಿವೆ. ಆದರೂ ನೀರಿನ ಸಂರಕ್ಷಣೆ ಮತ್ತು ನೀರಿನ ನಿರ್ವಹಣಾ ಪದ್ದತಿಗಳನ್ನು ನಮ್ಮ ಹಿರಿಯರು ಅಳವಡಿಸಿಕೊಂಡ ರೀತಿಯನ್ನು ದೇಶದ ಜನರು ಇನ್ನೂ ಅನುಸರಿಸುತ್ತಿದ್ದಾರೆ. ಇಂತಹ ತತ್ವಗಳನ್ನು
ವಿಶ್ವಾದ್ಯಂತ ಅಳವಡಿಸಿಕೊಂಡರೆ ನೀರಿನ ನಿರ್ವಹಣೆ ಮತ್ತು ಬಿಕ್ಕಟ್ಟನ್ನು ಸುಲಭವಾಗಿ ತಪ್ಪಿಸಬಹುದಾಗಿದೆ ಎಂದರು.

ರಾಜಸ್ಥಾನದ ಬರ ಪೀಡಿತ ಗ್ರಾಮಗಳ ಮುಖವನ್ನು ಬದಲಾಯಿಸಲು ಮತ್ತು ಅವುಗಳನ್ನು ನೀರಿನ ಸ್ವಾವಲಂಬಿಯನ್ನಾಗಿ ಮಾಡಲು ಮಾಡಿದ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದಿರುವ ಡಾ| ಸಿಂಗ್‌, ನೀರಿನ ಸಾಕ್ಷರತಾ ಆಂದೋಲನ ಆರಂಭಿಸುವ ಮೂಲಕ ಬಿಕ್ಕಟ್ಟು ನಿವಾರಿಸಬಹುದು ಎಂದು ಹೇಳಿದರು.

Advertisement

ರಾಜಸ್ಥಾನದ ಬರ ಪೀಡಿತ ಹಳ್ಳಿಗಳಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಸರ್ಕಾರದ ಸಹಾಯವಿಲ್ಲದೇ ಮತ್ತು ಜನರ ಸಹಕಾರ ಪಡೆದು 12 ಬತ್ತಿ ಹೋದ ನದಿಗಳನ್ನು ಪುನರುಜ್ಜೀವಗೊಳಿಸಿದ ಕುರಿತು, ಲಕ್ಷಾಂತರ ಬತ್ತಿದ ಕೊಳವೆಬಾವಿಗಳ ಸುಧಾರಿತ ಅಂತರ್ಜಲ ಮಟ್ಟ ಭರ್ತಿ ಮಾಡಿದ ಕುರಿತು, ಬರ ಪೀಡಿತ ಪ್ರದೇಶಗಳಲ್ಲಿ ತರಕಾರಿ ಬೆಳೆದು ನವದೆಹಲಿ ಮತ್ತು ರಾಜಸ್ಥಾನದ ಜೈಪುರ ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಮಾಡಿದ ಕುರಿತು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅಂತರ್ಜಲ ಸಂಪನ್ಮೂಲಗಳ ಪುನರುಜ್ಜೀವನದ ತುರ್ತು ಅವಶ್ಯಕತೆ ಇದೆ. ಈ ಮೂಲಗಳನ್ನು ರಕ್ಷಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿದರು. ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ನೀರನ್ನು ಉಳಿಸಲು ಮತ್ತು ರಕ್ಷಿಸಲು ವಿದ್ಯಾರ್ಥಿಗಳಿಗೆ ಪ್ರತಿಜ್ಞಾನವಿಧಿ  ಬೋಧಿಸಿದರು.

ಗೌರವಾನ್ವಿತ ಅತಿಥಿಯಾಗಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ರಾವ್‌, ಧಾರವಾಡ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ರಾಜೇಂದ್ರ ಪೋದ್ದಾರ ಇದ್ದರು.

ವಿವಿ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರೀ ನಿರೂಪಿಸಿದರು, ಕೆ. ನೀಲಾ ಸ್ವಾಗತಿಸಿದರು, ಡಾ| ಸಂಪತರಾವ್‌ ವಂದಿಸಿದರು.

ಸಮಾಜದ ಎಲ್ಲ ವರ್ಗದವರು ವಿಶೇಷವಾಗಿ ಯುವ ಪೀಳಿಗೆಗಳು ಮತ್ತು ವಿದ್ಯಾರ್ಥಿಗಳ ಸಹಯೋಗದ ಪ್ರಯತ್ನದಿಂದ ಜಲ-ಜಂಗಲ್‌-ಜಮೀನ್‌ ಸಂರಕ್ಷಣೆ ಚಳವಳಿ ಮತ್ತು ತತ್ವಗಳ ಆಧಾರದ ಮೇಲೆ ಪರಿಣಾಮಕಾರಿಯಾದ ನೀರಿನ ಸಾಕ್ಷರತಾ ಆಂದೋಲನವನ್ನು ಜನಸಮುದಾಯದಿಂದ ನಡೆಸಬಹುದಾಗಿದೆ.
ರಾಜೇಂದ್ರಸಿಂಗ್‌,
ಜಲತಜ್ಞ, ರಾಜಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next