ಕಲಬುರಗಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಕಟ್ಟಾಳು, ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಖರ್ಗೆ ರಾಜ್ಯಸಭೆ ಸದಸ್ಯರಾಗಿ ಅವಿರೋಧ ಆಯ್ಕೆಯಾದರು ಎನ್ನುವ ವಿಷಯ ಪ್ರಕಟವಾಗುತ್ತಿದ್ದಂತೆ ಪಕ್ಷದ ಕಚೇರಿ ಎದರು ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಪರ ಹಾಗೂ ನಾಯಕರ ಪರ ಘೋಷಣೆ ಕೂಗಿ ಸಂಭ್ರಮಿಸಲಾಯಿತು. ಸಂಸದೀಯ ಪಟುವಾಗಿರುವ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದಕ್ಕೆ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಇತರ ನಾಯಕರನ್ನು ಕಾರ್ಯಕರ್ತರು ಅಭಿನಂದಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡರಾದ ನೀಲಕಂಠರಾವ್ ಮೂಲಗೆ, ಮಹಾಂತಪ್ಪ ಸಂಗಾವಿ, ರಾಜಗೋಪಾಲ ರೆಡ್ಡಿ, ಅರುಣಕುಮಾರ ಪಾಟೀಲ, ಡಾ| ಕಿರಣ ದೇಶಮುಖ, ಈರಣ್ಣ ಝಳಕಿ, ಜಿ. ವಿಜಯಕುಮಾರ, ಸಂತೋಷ ಪಾಟೀಲ ದಣ್ಣೂರ, ಚಂದ್ರಶೇಖರ ಸುಲ್ತಾನಪುರ, ಮಜರಖಾನ್, ಮಾಪಣ್ಣಾ ಗಂಜಗೇರಿ, ಶಾಮ ನಾಟೀಕಾರ, ರಾಜೀವ ಜಾನೆ, ಜಗನ್ನಾಥ ಗೋಧಿ ಶಿವಕುಮಾರ ಬಾಳಿ, ಮಲ್ಲಿಕಾರ್ಜುನ ಸಾಗರ, ಚಂದ್ರಿಕಾ ಪರಮೇಶ್ವರ, ಮತೀನ ಪಟೇಲ್ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ರಾಜಕೀಯ ಜೀವನುದ್ದಕ್ಕೂ ತಮ್ಮ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೇ ಮಾಡುತ್ತಾ ಬಂದಿರುವ ಖರ್ಗೆ ಇನ್ಮುಂದೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ವಿರೋಧಿ ನೀತಿಗಳ ವಿರುದ್ಧ ಮತ್ತೆ ಗುಡುಗಲಿದ್ದಾರೆ.
ಅಲ್ಲಮಪ್ರಭು ಪಾಟೀಲ ನೆಲೋಗಿ
ಮಾಜಿ ಎಂಎಲ್‌ಸಿ