ಕಲಬುರಗಿ: ಕೊರೊನಾ ಸೋಂಕು ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆಯಿಂದ ನಗರದ ಪ್ರಮುಖ ಪ್ರದೇಶದಲ್ಲಿ ಸೋಂಕು ನಿವಾರಕ ಸುರಂಗಗಳನ್ನು ಸ್ಥಾಪಿಸಲಾಗಿದೆ. ನಗರದ ಡಿಎಆರ್ ಪೊಲೀಸ್ ವಸತಿ ಗೃಹದ ಪ್ರದೇಶದ ದ್ವಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವೈರಾಣು ನಾಶಕ ಸುರಂಗ ಅಳವಡಿಸಲಾಗಿದೆ. ನಿತ್ಯ ಕೊರೊನಾ ನಿಯಂತ್ರಣದ ಕರ್ತವ್ಯದಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮುತುವರ್ಜಿ ವಹಿಸಿ ರಾಸಾಯನಿಕ ಸಿಂಪಡಿಸುವ ಸುರಂಗ ಸ್ಥಾಪಿಸಿದ್ದಾರೆ.
ಇದು ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೇ ಕುಟುಂಬದವರಿಗೂ ಅನುಕೂಲವಾಗಿದೆ. ಪೊಲೀಸರು ಕರ್ತವ್ಯಕ್ಕಾಗಿ ಮನೆ ಹೊರಗೆ ಬರುವಾಗ ಹಾಗೂ ಮರಳಿ ಮನೆಗೆ ಹೋಗುವಾಗ ಸುರಂಗದಲ್ಲಿ ಒಮ್ಮೆ ಹಾಯ್ದು ಹೋಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಿದ್ದಾರೆ. ಅದೇ ರೀತಿ ಕುಟುಂಬದವರು ಮನೆಯಿಂದ ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರ ಬರಬೇಕಾದರೂ ಇದೇ ಸುರಂಗದ ಮೂಲಕ ಹಾಯ್ದು ಬರಬೇಕು. ಈ ಮೂಲಕ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿ ಬಗ್ಗೆ ಕಾಳಜಿ ವಹಿಸುವುದಲ್ಲದೇ ಕುಟುಂಬದವರ ಕಾಳಜಿ ಮುಖ್ಯ ಎನ್ನುವ ಸಂದೇಶವನ್ನು ಎಸ್‌ಪಿ ಮಾರ್ಬನ್ಯಾಂಗ್ ಸಾರಿದ್ದಾರೆ.
ನಗರ ಪೊಲೀಸ್ ಆಯುಕ್ತಾಲಯದಿಂದ ನಗರದ ಮೂರು ಕಡೆಗಳಲ್ಲಿ ಸಾರ್ವಜನಿಕವಾಗಿ ಸುರಂಗ ಅಳವಡಿಸಲಾಗಿದೆ. ವಾಜಪೇಯಿ ಬಡಾವಣೆಯಲ್ಲಿರುವ ತರಕಾರಿ ಮಾರುಕಟ್ಟೆ, ಎಪಿಎಂಸಿ ಹಾಗೂ ಶಿವಾಜಿ ನಗರ ಬಡಾವಣೆಯಲ್ಲಿ ನಗರ ಪೊಲೀಸ್ ಇಲಾಖೆಯಿಂದ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸುವ ಸುರಂಗಗಳನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಈ ಸುರಂಗಗಳಲ್ಲಿ ಹಾಯ್ದು ಹೋದರೆ ರಾಸಾಯನಿಕ ತಂತಾನೇ ಸಿಂಪಡಣೆಯಾಗಿ ಸೋಂಕು ಕಳೆಯಲಿದೆ.
ನಗರ ಪ್ರದೇಶದಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸೋಂಕು ಕಳೆಯುವ ಸುರಂಗಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಸಂಭವನೀಯ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಸತೀಶಕುಮಾರ ತಿಳಿಸಿದ್ದಾರೆ. ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರಿಗಾಗಿ ಸುರಂಗ ನಿರ್ಮಿಸಲಾಗಿದೆ. ಈ ಸುರಂಗಗಳಲ್ಲಿ ಹನಿ ನೀರಾವರಿ ಮಾದರಿ ಪೈಪ್‌ಗ್ಳನ್ನು ಅಳವಡಿಸಲಾಗಿದ್ದು, ಸೋಡಿಯಂ ಹೈಪೊಕ್ಲೋರೈಟ್ ಮಿಶ್ರಣದ ನೀರು ಸಿಂಪಡಣೆಯಾಗುತ್ತದೆ.