Advertisement

ಜನಪದ ಕಲೆ ಉಳಿಸಿ ಬೆಳೆಸೋಣ: ರೇವೂರ

12:44 PM Feb 27, 2020 | Naveen |

ಕಲಬುರಗಿ: ಆಧುನಿಕತೆ ಭರಾಟೆಗೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಳವಳ ವ್ಯಕ್ತಪಡಿಸಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಜ್‌ ಸುಲ್ತಾನಪುರದ ಸುಲಫಲ ಮಠಗಳ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ತಾಜ್‌ ಸುಲ್ತಾನಪುರದ ಸುಲಫಲ ಮಠದಲ್ಲಿ ಏರ್ಪಡಿಸಲಾಗಿದ್ದ 2019-2020ನೇ ಸಾಲಿನ ಮಹಿಳಾ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಶಿಸಿ ಹೋಗುತ್ತಿರುವ ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಜನಪದ ಕಲೆ ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಜನಪದ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸುಲಫಲ ಮಠ, ಶ್ರೀಶೈಲ ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಯುವಜನತೆ ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹದಿಂದ ಹೊರಬಂದು, ನಮ್ಮ ಪೂರ್ವಿಕರು ಬೆಳೆಸಿದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಜಾನಪದ ನಮ್ಮ ಸಂಸ್ಕೃತಿ ತಾಯಿಬೇರು. ಜಾನಪದ ಸಾಹಿತ್ಯ, ಕಲೆ-ಸಂಸ್ಕೃತಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಆತನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ. ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಾಮರಸ್ಯ ಬೆಸೆಯುತ್ತದೆ. ವಿಶ್ವಮಾನವನನ್ನಾಗಿ ಮಾಡುತ್ತದೆ ಎಂದರು. ತಾಜ್‌ಸುಲ್ತಾನಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಾವಿತ್ರಿ ರೇವಣಸಿದ್ಧ ಕಲಕೋರಿ ಅಧ್ಯಕ್ಷತೆ, ಸೊನ್ನ ವಿರಕ್ತಮಠದ ಪೂಜ್ಯ ಡಾ| ಶಿವಾನಂದ ಮಹಾ ಸ್ವಾಮೀಜಿ, ಚವದಾಪುರಿ ಹಿರೇಮಠದ ಪೂಜ್ಯ ರಾಜಶೇಖರ ಶಿವಾಚಾರ್ಯರು, ಗುರುಬಸವ ಬ್ರಹನ್ಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

ನಿವೃತ್ತ ಎಸ್‌ಪಿ ಎಸ್‌. ಬಸವರಾಜ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಮಾತನಾಡಿದರು. ಕಲಾವಿದರಾದ ವಿಜಯಲಕ್ಷ್ಮೀ ಕೆಂಗನಾಳ ಅವರಿಂದ ವಚನಗಾಯನ, ನಿವೇದಿತಾ ರಾಜಾಪುರ ಅವರಿಂದ ಸಿತಾರ ವಾದನ, ಸಂಧ್ಯಾ ಭಟ್‌ ಅವರಿಂದ ಸಮೂಹ ನೃತ್ಯ, ಮಹಾದೇವಿ ಸಿ. ಅವರಿಂದ ತತ್ವಪದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರೇಣುಕಾ ಪಿ. ಅವರಿಂದ “ಅವ್ವ’ ನಾಟಕ ಪ್ರದರ್ಶನಗೊಂಡಿತು.

ಪ್ರಾಧ್ಯಾಪಕಿ ಚಂದ್ರಭಾಗಾ ಬಿದರಿ “ಮಹಿಳೆ ಮತ್ತು ಸಾಮಾಜೀಕರಣ’ ವಿಷಯ ಕುರಿತು, ಡಾ| ಶೈಲಜಾ ರಾಜಶೇಖರ “ಮಹಿಳಾ ದೌರ್ಜನ್ಯ’ ಕುರಿತು, ಡಾ| ಚಿತ್ಕಲಾ ಮಠಪತಿ “ಮಹಿಳೆ ಮತ್ತು ಕನ್ನಡ ಭಾಷಾ ಉಳಿವು’ ಕುರಿತು, ಡಾ| ಶಾರದಾದೇವಿ ಜಾಧವ “ವಚನ ಸಾಹಿತ್ಯ ಮತ್ತು ಮಹಿಳಾ ಸಮಾನತೆ’ ಕುರಿತು ವಿಷಯ ಮಂಡನೆ ಮಾಡಿದರು.

ಗಮನ ಸೆಳೆದ ಕವಿಗೋಷ್ಠಿ: ಕವಯಿತ್ರಿ ಆರತಿ ಕಡಗಂಚಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಯಿತ್ರಿಯರಾದ ಜ್ಯೋತಿ ಬೊಮ್ಮಾ, ಸಂಗೀತಾ ಹಿರೇಮಠ, ಚಂದ್ರಕಲಾ ಎಂ.ಪಾಟೀಲ, ಅರ್ಚನಾ ಸುರಪ್ಪಗೋಳ, ಪ್ರಜ್ಞಾ ಹರವಾಳ, ಸುನಿತಾ ಮಾಳಗೆ, ವಿಜಯಲಕ್ಷ್ಮೀ ದೊಡ್ಡಮನಿ, ಭುವನೇಶ್ವರಿ ಗಂಗಶೆಟ್ಟಿ, ಸುಭದ್ರಮ್ಮಾ ರಂಜೋಳಿ, ಸರಸಿಜಾ ರಾಜನ್‌, ಅಂಬಿಕಾ ಡಬಗೇರಾ, ರೇಣುಕಾ ಜಿ.ಪಾಟೀಲ ಸ್ವರಚಿತ ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.

ನಾಡಿದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾ ತಂಡಗಳಿಂದ ನಡೆದ ಸಾಂಸ್ಕೃತಿಕ ಮೆರವಣಿಗೆ ಗ್ರಾಮದ ಜನತೆಯಿಂದ ಸೈ ಎನಿಸಿಕೊಂಡವು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ನಡೆಸಿಕೊಟ್ಟ ಚಿತ್ರಕಲಾ ಶಿಬಿರ ಕಲಾ ಲೋಕವನ್ನೇ ಹುಬ್ಬೇರಿಸುವಂತೆ ಮಾಡಿತು. ಹಣಮಂತರಾಯ ಅಟ್ಟೂರ, ಎಸ್‌.ಎಂ. ಪಟ್ಟಣಕರ್‌, ಪುರಂದರ ಭಟ್‌, ಗುರು ಸುಲ್ತಾನಪುರ, ಭರತೇಶ ಶೀಲವಂತರ, ವಿಶ್ವನಾಥ ತೊಟ್ನಳ್ಳಿ ಕುಸನೂರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next