ಕಲಬುರಗಿ: ಕೋವಿಡ್ ನೊಂದಿಗೆ ಇನ್ಮುಂದೆ ನಾವು ಜೀವನ ಸಾಗಿಸುವ ಅನಿರ್ವಾಯತೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಕೋವಿಡ್ ಕಾಲದಲ್ಲಿ ನಾವೆಲ್ಲ ಎಕ್ಸಾಂ ವಾರಿಯರ್ಸ್ ಆಗಿ ಕೆಲಸ ಮಾಡೋಣ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರವಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ತಜ್ಞರು ಮತ್ತು ರಾಜಕೀಯ ನಾಯಕರ ಸಲಹೆ, ಕೇಂದ್ರ ಗೃಹ ಸಚಿವಾಲಯದ ಎಸ್‌ಒಪಿ ಮಾರ್ಗಸೂಚಿಯಂತೆ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ರಾಜ್ಯಾದ್ಯಂತ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಸುವ ಸಂಬಂಧ ಈಗಾಗಲೇ ರಾಜ್ಯದ 25 ಶೈಕ್ಷಣಿಕ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಪರೀಕ್ಷೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ನಡುವೆ ಪರೀಕ್ಷೆ ನಡೆಸಲು ಬರೀ ಸವಾಲಾಗಿ ಸ್ವೀಕರಿಸುವುದಲ್ಲ, ಇಂತಹ ಕ್ಲಿಷ್ಟಕರ ಸಮಯದಲ್ಲಿಯೂ ಸೇವೆಗೆ ಸಿಕ್ಕ ಅವಕಾಶ ಎಂದು ಅಧಿಕಾರಿಗಳು ಭಾವಿಸಬೇಕೆಂದರು.
ಪರೀಕ್ಷೆಗೆ ದಿನಾಂಕ ನಿಗದಿ ಮಾಡುವ ಮುನ್ನ ಹಲವು ಅಂಶಗಳು ಚರ್ಚೆಗೆ ಬಂದವು. ಪೂರ್ವಭಾವಿಯಾಗಿ ನಡೆಸಿದ ಪರೀಕ್ಷೆಗಳ ಫಲಿತಾಂಶದ ಆಧಾರದಲ್ಲೇ ಉತ್ತೀರ್ಣ ಮಾಡಬೇಕು. 1ರಿಂದ 9ನೇ ತರಗತಿಯಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಹಾಗೆ ಉತ್ತೀರ್ಣ ಮಾಡಬೇಕೆನ್ನುವ ವಿಷಯ ಚರ್ಚೆಗೆ ಬಂತು. ನಾನೇ ಖುದ್ದಾಗಿ ಹಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ, ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಯಾವಾಗ ನಡೆಸುತ್ತೀರಿ ಎಂದೇ ಕೇಳಿದರು. ಪರೀಕ್ಷೆ ನಡೆಸದೇ ಪಾಸ್ ಮಾಡಿದರೆ ಓದಿದವರು, ಓದದವರು ಎಲ್ಲರೂ ಒಂದೇ ಆಗಿಬಿಡುತ್ತಾರೆ.
ಹೀಗಾಗಿ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ ಎಂದು ಕೆಲವರು ಹೇಳಿದರು. ಮತ್ತೆ ಕೆಲವರು, ಪರೀಕ್ಷೆ ಮಾಡದೆ ಹಾಗೆ ಪಾಸ್ ಮಾಡಿದರೆ ಭವಿಷ್ಯದುದ್ದಕ್ಕೂ “ಇದು ಕೋವಿಡ್ ಬ್ಯಾಚ್’ ಎನ್ನುವ ಹಣೆಪಟ್ಟಿ ಬೀಳುತ್ತದೆ ಎಂದು ಹೇಳಿಕೊಂಡರು ಎಂದು ವಿವರಿಸಿದರು. ಇವೆಲ್ಲ ಅಂಶಗಳನ್ನು ಮನಗಂಡು ಇಂತಹ ಸವಾಲಿನ ನಡುವೆಯೂ ಪರೀಕ್ಷೆಗೆ ನಡೆಸಲಾಗುತ್ತಿದೆ. ನಾವು ಕೋವಿಡ್ ಅನ್ನೂ ಗೆಲ್ಲಬೇಕು. ಪರೀಕ್ಷೆಯನ್ನು ನಡೆಸಬೇಕು. ಇದಕ್ಕಾಗಿ ಮಕ್ಕಳ ಸುರಕ್ಷತೆ ಪ್ರಥಮ ಆದ್ಯತೆ ಆಗಬೇಕು. ಅಲ್ಲದೇ ಪರೀಕ್ಷೆ ಬರೆಯುವ ಮಕ್ಕಳ ಆತ್ಮ ವಿಶ್ವಾಸವನ್ನು ಹೆಚ್ಚಿಸಬೇಕಿದೆ. ಇದಕ್ಕೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಪರೀಕ್ಷೆ ಪ್ರಶ್ನೆ ಪತ್ರಿಕೆ ಬಿಡಿಸುವ ಸೇರಿದಂತೆ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಜೂ. 10ರಿಂದ 20ರ ವರೆಗೆ ಚಂದನ ವಾಹಿನಿ ಮುಖಾಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ ನಡೆಯಲಿದೆ ಎಂದರು.
ಗಾಂಭಿರ್ಯತೆ ಇರಲಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ನಡೆಯುತ್ತಿರುವುದುರಿಂದ ಅಧಿಕಾರಿಗಳು ಮತ್ತು ಶಿಕ್ಷಕರಲ್ಲಿ ಪರೀಕ್ಷೆ ಗಾಂಭೀರ್ಯತೆ ಇರಲೇಬೇಕು. ಪರೀಕ್ಷೆ ವೇಳೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಹಾಲ್ ಟಿಕೆಟ್ ಸಮಸ್ಯೆಯಿಂದ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗದಂತೆ ಹಾಗೂ ಯಾವುದೇ ಅವಘಡಕ್ಕೆ ಆಸ್ಪದ ನೀಡದೇ ಪರೀಕ್ಷೆ ಸುಲಲಿತವಾಗಿ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳ “ಬ್ರೇಕಿಂಗ್ ನ್ಯೂಸ್’ಗೆ ಆಹಾರವಾಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕಲಬುರಗಿ ಡಿಡಿಪಿಐ ಶಾಂತಗೌಡ ಪಾಟೀಲ, ಯಾದಗಿರಿ ಡಿಡಿಪಿಐ ಶ್ರೀನಿವಾಸರೆಡ್ಡಿ, ಬೀದರ ಡಿಡಿಪಿಐ ಚಂದ್ರಶೇಖರ ಪರೀಕ್ಷಾ ಪೂರ್ವ ಕೈಗೊಂಡ ಸಿದ್ಧತೆಗಳನ್ನು ಸಭೆಗೆ ವಿವರಿಸಿದರು. ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಡಾ| ಅವಿನಾಶ ಜಾಧವ, ಎಂಎಲ್‌ಸಿ ಬಿ.ಜಿ. ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳೀನ್ ಅತುಲ್, ಜಿಲ್ಲಾ ಪಂಚಾಯತಿ ಸಿಇಒ ಡಾ| ಪಿ. ರಾಜಾ, ಯಾದಗಿರಿ ಜಿ.ಪಂ ಸಿಇಒ. ಶಿಲ್ಪಾ ಶರ್ಮಾ ಸೇರಿದಂತೆ ಯಾದಗಿರಿ, ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.