Advertisement

ಕಲಬುರಗಿ: ಸರಳ ಶರಣಬಸವೇಶ್ವರ ರಥೋತ್ಸವ

06:17 PM Apr 03, 2021 | Team Udayavani |

ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಈ ಭಾಗದಲ್ಲಿ ದೊಡ್ಡ ಜಾತ್ರೆ. ರಂಗಪಂಚಮಿ ಮುಂಚೆ ಉಚ್ಚಾಯಿ ಹಾಗೂ ಮರುದಿನ ರಥೋತ್ಸವದೊಂದಿಗೆ ಆರಂಭವಾಗಿ ಯುಗಾದಿವರೆಗೆ 11 ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ.

Advertisement

ಆದರೆ, ಕೊರೊನಾದಿಂದ ಕಳೆದ ವರ್ಷ ಹಾಗೂ ಪ್ರಸಕ್ತವಾಗಿ ಸಹಸ್ರಾರು ಭಕ್ತರು ಭಾಗವಹಿಸುವುದಕ್ಕೆ ನಿರ್ಬಂಧ ಹಾಕಿದಂತಾಗಿದೆ. ಶುಕ್ರವಾರ ನಡೆದ
18ನೇ ಶತಮಾನದ ಸಂತ, ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 199ನೇ ಜಾತ್ರೆಯ ಧಾರ್ಮಿಕ ಆಚರಣೆ ಹಾಗೂ ರಥೋತ್ಸವ ಕಾರ್ಯದಲ್ಲಿ ಪೊಲೀಸರ
ಭದ್ರತಾ ವ್ಯವಸ್ಥೆ ಮಧ್ಯೆ ಭಕ್ತಾದಿ ಜನ ಪಾಲ್ಗೊಂಡು ಸರಳವಾಗಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡರು.

ಶರಣಬಸವೇಶ್ವರ ದೇವಸ್ಥಾನದ ಎಲ್ಲ ಪ್ರವೇಶದ್ವಾರಕ್ಕೆ ಬಾರಿಖೇಡ ಹಾಕುವ ಮೂಲಕ ಬಂದ್‌ ಮಾಡಲಾಗಿತ್ತು. ಆಯಾ ದ್ವಾರಬಾಗಿಲದ ಎದುರು ಪೊಲೀಸರು ಉಪಸ್ಥಿತರಿದ್ದರು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬಾರದು ಮತ್ತು ಜನರ ದೊಡ್ಡ ಸಭೆಗೆ ಅವಕಾಶ ನೀಡಬಾರದು ಎಂಬ ಸರ್ಕಾರದ ನಿರ್ಧಾರವನ್ನು ಪೊಲೀಸ್‌ ಸಿಬ್ಬಂದಿ ಅಚ್ಚುಕಟ್ಟಾಗಿ ನಿಭಾಯಿಸಿದರು. ಕೈ ಮುಗಿದು ಕೇಳಿಕೊಳ್ಳುತ್ತೇವೆ. ದೇವಾಲಯ ಒಳಗಡೆ ಬರಬೇಡಿ. ದೂರದಿಂದಲೇ ಶರಣರನ್ನು ಪ್ರಾರ್ಥಿಸಿ. ಕೊರೊನಾ ದೂರ ಮಾಡಿ ಎಂಬುದಾಗಿ ಮನವಿ ಮಾಡುತ್ತಿರುವುದು ಗಮನ ಸೆಳೆಯಿತು.

ಇದರ ನಡುವೆ ಕೆಲ ಭಕ್ತಾದಿಗಳು ಆರಕ್ಷಕ ಸಿಬ್ಬಂದಿ ಯವರ ಮನವಿಗೆ ಮಾನ್ಯ ಮಾಡದೇ ದೇವಾಲಯ ಆವರಣದಲ್ಲಿ ನಡೆಯುತ್ತಿದ್ದ ರಥೋತ್ಸವದಲ್ಲಿ
ಭಾಗವಹಿಸಿದ್ದರು. ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪರಮ ಪೂಜ್ಯ ಡಾ| ಶರಣಬಸಪ್ಪ ಅಪ್ಪಾಜಿ ಜಾತ್ರೆಯ ಸಂಪೂರ್ಣ ಧಾರ್ಮಿಕ ಉತ್ಸವ
ಮತ್ತು ಸಮಾರಂಭಗಳನ್ನು, ಕೋವಿಡ್‌-19 ಎರಡನೇ ಅಲೆಯ ಕಾರಣ ಜಾತ್ರೆಯನ್ನು ಸರಳ ರೀತಿಯಲ್ಲಿ ನಡೆಸುವುದಾಗಿ ಹಾಗೂ ರಥೋತ್ಸವದ ಸಂದರ್ಭದಲ್ಲಿ
ದೇವಾಲಯ ಆವರಣದೊಳಗೆ ಹೆಚ್ಚಿನ ಸಂಖ್ಯೆಯ ಜನರ ಭಾಗವಹಿಸುವಿಕೆಯನ್ನು ತಪ್ಪಿಸ ಬೇಕೆಂಬ ಸರ್ಕಾರದ ಮನವಿ ಯನ್ನು ಪಾಲಿಸುವುದಾಗಿ ನಿರ್ಧರಿಸಿದರು.

ಡಾ| ಅಪ್ಪಾಜಿಯವರು ಶುಕ್ರವಾರ ಮುಂಜಾನೆ ಶರಣಬಸವೇಶ್ವರರ ಕರ್ತು ಗದ್ದುಗೆಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿದರು. ಗುರುಪಾದ ಪೂಜೆಯನ್ನು ಕೈಗೊಳ್ಳುವ ಮೂಲಕ ಇನ್ನಿತ್ತರ ಧಾರ್ಮಿಕ ಸಮಾರಂಭಗಳನ್ನು ಮನೆಯಲ್ಲಿಯೇ ಆಚರಿಸುವಂತೆ ಭಕ್ತಾದಿಗಳಿಗೆ ಸೂಚಿಸಿದರು.

Advertisement

ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜಿಯರ ಸಹೊದರ ಬಸವರಾಜ ಅಪ್ಪಾಜಿ, ಮಾತೋಶ್ರೀ ಡಾ|ದಾಕ್ಷಾಯಿಣಿ ಅವ್ವಾಜಿ, ಬಸವರಾಜ ದೇಶಮುಖ, ಡಾ| ಮಲ್ಲಿಕಾರ್ಜುನ ನಿಷ್ಠಿ ಇನ್ನಿತರ ಕುಟುಂಬ ಸದಸ್ಯರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್‌ ವಿ. ನಿಷ್ಠಿ, ಕುಲಸಚಿವ ಡಾ| ಅನೀಲಕುಮಾರ ಜಿ. ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ಡೀನ್‌ ಡಾ| ಲಕ್ಷ್ಮಿ ಪಾಟೀಲ ಮಾಕಾ ಇತರರು ಇದ್ದರು.

ದೇವರ ದರ್ಶನಕ್ಕೆಂದು ಆಗಮಿಸಿದ್ದ ಗಣ್ಯರಲ್ಲಿ ಪ್ರಮುಖರಾದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕರಾದ ದೊಡ್ಡಪ್ಪ ಗೌಡ ಪಾಟೀಲ್‌ ನರಿಬೋಳ, ವಿಧಾ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ನೀತಿನ ಗುತ್ತೇದಾರ ಸೇರಿದಂತೆ ಮುಂತಾದವರಿದ್ದರು.

ರಥೋತ್ಸವಕ್ಕೆ ಚಾಲನೆ
ಮಧ್ಯಾಹ್ನದ ನಂತರ ಶುಭ ಘಳಿಗೆಯಲ್ಲಿ ಸಂಸ್ಥಾನದ 9ನೇ ಪೀಠಾ ಧಿಪತಿ ಪೂಜ್ಯ. ಚಿ. ದೊಡ್ಡಪ್ಪ ಅಪ್ಪಾಜಿ ಕುಂಭ ಪೂಜೆ ಕೈಗೊಂಡರು. ತದನಂತರ ಶ್ರೀಂಗಾರಗೊಂಡ ರಥಕ್ಕೆ ಪೂಜೆ ಸಲ್ಲಿಸಿದರು. ಡಾ| ಅಪ್ಪಾಜಿ ಅಂದು ಶ್ರೀ ಶರಣಬಸವೇಶ್ವರರು ಬಳಸುತ್ತಿದ್ದ, ಮಹಿಮೆಯಿಂದ ಕೂಡಿದ ಪರುಷ ಬಟ್ಟಲು, (ಬೆಳ್ಳಿಯ ಬಟ್ಟಲು) ಮತ್ತು ಲಿಂಗ ಸಜ್ಜಿಕೆಯನ್ನು ಭಕ್ತಾದಿಗಳಿಗೆ ಪ್ರದರ್ಶಿಸಿ, ಶಂಖವನ್ನು ಊದುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಕೋವಿಡ್‌ ಶಾಶ್ವತ
ಪರಿಹಾರಕ್ಕೆ ಪ್ರಾರ್ಥನೆ ಭಕ್ತರಿಗೆ ಆರೋಗ್ಯ ಸಂಪತ್ತು ನೀಡುವಂತೆ ಮಹಾಮಹಿಮ ಶರಣರಲ್ಲಿ ಪ್ರಾರ್ಥಿಸಲಾಗಿದೆ. ಬಹುಮುಖ್ಯವಾಗಿ ಕೋವಿಡ್‌-19 ಈ ಸಮಸ್ಯೆಗೆ
ಶಾಶ್ವತ ಪರಿಹಾರ ದೊರೆಯಬೇಕೆಂದು ದೇವರಲ್ಲಿ ಬೇಡಿಕೊಳ್ಳಲಾಗಿದೆ.
ಡಾ| ಶರಣಬಸವಪ್ಪ ಅಪ್ಪಾಜಿ, ಪೀಠಾಧಿಪತಿ,
ಶರಣಬಸವೇಶ್ವರ ದಾಸೋಹ ಸಂಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next