ಕಲಬುರಗಿ: 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅನೇಕ ತತ್ವ, ವಿಚಾರಗಳ ಕುರಿತು ನಡೆಯುತ್ತಿದ್ದ ಚರ್ಚೆ, ಜನರಲ್ಲಿರುವ ಜಾತಿ ಬೇಧ-ಭಾವ ತೊಡೆದುಹಾಕಲು ಶರಣರು ಅಂತರ್ಜಾತಿ ವಿವಾಹ ಮಾಡಿದ ಕಾರಣ ಕಲ್ಯಾಣ ಕ್ರಾಂತಿ ನಡೆಯಿತು ಎಂದು ಚಿಗರಳ್ಳಿಯ ಮರುಳಶಂಕರದೇವ ಗುರುಪೀಠದ ಸಿದ್ಧಬಸವ ಕಬೀರ ಮಹಾ ಸ್ವಾಮೀಜಿ ನುಡಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರು ತಮ್ಮ ಜೀವನದ ಮೂಲಕವೇ ಸಮಾಜ ತಿದ್ದಲು ಪ್ರಯತ್ನಿಸಿದರು. ಇಂತಹ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕದಿಂದಲೇ ಜೀವನ ಉತ್ತುಂಗಕ್ಕೆ ಕೊಂಡ್ಯೊಯ್ಯಬೇಕು ಎಂದು ಸಲಹೆ ನೀಡಿದರು.
ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ| ಶಿವರಾಜ ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ 360 ಶಿವ ಶರಣರಿದ್ದರು. ಇವರೆಲ್ಲ ಬದುಕಿನಲ್ಲಿ ಸಾಧನೆ ಮಾಡಿದ ಮಹಾನ್ ಶರಣರಾಗಿದ್ದಾರೆ. ಯಾವುದೇ ಜಾತಿ, ಮತ, ಪಂಥಗಳನ್ನು ನೋಡದ ಇವರು ಸಮಾಜದಲ್ಲಿನ ಕಂದಾಚಾರಗಳನ್ನು ತೊಡೆದುಹಾಕುವಲ್ಲಿ ಪ್ರಯತ್ನಿಸಿದರು ಎಂದು ಹೇಳಿದರು.
ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಹಾಗೂ ಅನೇಕ ಶರಣರು ತಮ್ಮ ಅಂತರಂಗ-ಬಹಿರಂಗದ ಶುದ್ಧ ಕಾಯಕದಿಂದ ಭಕ್ತಿಯ ಮಾರ್ಗ ತೋರಿಸಿದರು. ಬಸವಣ್ಣನ ದಾರಿಯಲ್ಲಿಯೇ ಜೀವನ ನಡೆಸಿದ ಅನೇಕ ಶರಣರು ಇಂದಿಗೂ ನಮಗೆ ಮಾರ್ಗದರ್ಶನ. ಅವರ ವಚನಗಳನ್ನು ಓದಿ ಜೀವನ ನಡೆಸಿದರೆ ಸಮಾಜ ಸುಸ್ಥಿರವಾಗಿರುತ್ತದೆ ಎಂದರು.
ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಕೋಡ್ಲಾ ಉರಿಲಿಂಗಪೆದ್ದಿ ಮಠದ ಉಪಾಧ್ಯಕ್ಷ ಶಂಕರ ಕೋಡ್ಲಾ, ಶರಣ ಡೋಹರ ಕಕ್ಕಯ್ನಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ, ಅಖೀಲ ಭಾರತ ಬಸವ ಮಾದಾರ ಚನ್ನಯ್ಯ ಸಮಾಜದ ಕಾರ್ಯದರ್ಶಿ ರುದ್ರಪ್ಪ ವಾಲೀಕರ, ಮಾದಾರ ಧೂಳಯ್ಯ ಸಮಾಜದ ಅಧ್ಯಕ್ಷ ರಮೇಶ ಹೊಸಮನಿ, ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಕಾಶಿರಾಯ ಹರಳಯ್ಯ ನಂದೂರಕರ್, ಮಾಜಿ ಮಹಾಪೌರರಾದ ಚಂದ್ರಿಕಾ ಪರಮೇಶ್ವರ, ಸಹಾಯಕ ಆಯುಕ್ತ ರಾಮಚಂದ್ರ ಗಡೇದ ಹಾಗೂ ಮತ್ತಿತರರು ಇದ್ದರು.