ಕಲಬುರಗಿ: ಬೆಳೆಗಳಿಗೆ (ತೊಗರಿ, ಹತ್ತಿ ಇತ್ಯಾದಿ) ಕೀಟನಾಶಕ ಸಿಂಪಡಣೆ ಮಾಡುವಾಗ ಕಣ್ಣುಗಳ ಸಂರಕ್ಷಣೆ ವಹಿಸದಿದ್ದರೆ ದೃಷ್ಟಿ ದೋಷಕ್ಕೆ ಕಾರಣವಾಗಬೇಕಾಗುತ್ತದೆ ಎಂದು ಹಿರಿಯ ಖ್ಯಾತ ನೇತ್ರ ತಜ್ಞೆ, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ.ರಾಜಶ್ರೀ ವಿ. ರೆಡ್ಡಿ ಹೇಳಿದರು.
ಬೆಳೆಗಳಿಗೆ ಕೀಟನಾಶಕ ಸಿಂಪಡಣೆ ಮಾಡುವಾಗ ಸರಿಯಾದ ಜಾಗೃತಿ ವಹಿಸದೇ ಕಣ್ಣುಗಳಿಗೆ ತಾಗಿಸಿಕೊಂಡ ಪರಿಣಾಮ ತೊಂದರೆಗೆ ಒಳಗಾಗಿ ದಿನಾ ಹತ್ತಾರು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಎಲ್ಲರೂ ಕೀಟನಾಶಕ ಸಿಂಪಡಣೆ ಮಾಡುವಾಗ ಕಣ್ಣುಗಳ ಸುರಕ್ಷತಾ ಕ್ರಮಗಳನ್ನು ವಹಿಸಬೇಕೆಂದು ವಿಶ್ವ ದೃಷ್ಟಿ ದಿನದಂಗವಾಗಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬೆಳೆ ಬಹಳ ಎತ್ತರವಾಗಿ ಬೆಳೆದಿದ್ದರಿಂದ ಜತೆಗೆ ಗಾಳಿಗೆ ವಿರುದ್ಧವಾಗಿ ಕೀಟನಾಶಕ ಸಿಂಪರಣೆ ಮಾಡುತ್ತಿರುವುದರಿಂದ ಕಣ್ಣಿಗೆ ತಾಕುತ್ತಿರುವುದರಿಂದ ಕಣ್ಣುಗಳ ದುಷ್ಪರಿಣಾಮ ಬೀರಿ ದೃಷ್ಟಿ ದೋಷಕ್ಕೆ ಕಾರಣವಾಗುತ್ತಿದೆ. ಹೀಗಾಗಿ ರೈತರು ಹಾಗೂ ಕೃಷಿ, ಕೂಲಿ ಕಾರ್ಮಿಕರು ನೇತ್ರದ ಬಗ್ಗೆ ಮುಂಜಾಗೃತೆ ವಹಿಸುವುದರ ಮುಖಾಂತರ ಕಣ್ಣುಗಳನ್ನು ಸಂರಕ್ಷಿಸಬೇಕೆಂದರು.
ಅ.10 ರಂದು ವಿಶ್ವ ದೃಷ್ಟಿ ದಿನವನ್ನು ಪ್ರತಿ ವರ್ಷದಂತೆ ಆಚರಿಸಲಾಗುತ್ತಿದ್ದು, ಈ ವರ್ಷದ ಧ್ಯೇಯವಾಕ್ಯ, ಮಕ್ಕಳೇ ನಿಮ್ಮ ಕಣ್ಣುಗಳನ್ನು ಪ್ರೀತಿಸಿ ಎಂಬುದಾಗಿದೆ.
ಈಗಾಗಲೇ ಸಿದ್ಧರಾಮಯ್ಯ ಅವರು ಕಣ್ಣಿನ ಆಸ್ಪತ್ರೆ ಸಂಸ್ಥೆಯ ವತಿಯಿಂದ ನೂರಾರು ಶಾಲೆಗಳಿಗೆ ಹೋಗಿ ಮಕ್ಕಳ ನೇತ್ರ ತಪಾಸಣೆಗೈದು, ಪ್ರಾಥಮಿಕ ದೋಷವಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸಾ ಕ್ರಮಗಳನ್ನು ಉಚಿತವಾಗಿ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಸಿದ್ದಾರಾಮೇಶ್ವರ ಆಸ್ಪತ್ರೆಯ ಡಾ. ವಿಶ್ವನಾಥ ರೆಡ್ಡಿ, ಡಾ.ಸಿದ್ದಲಿಂಗರೆಡ್ಡಿ ಉಪಸ್ಥಿತರಿದ್ದರು.